ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತರಾಖಂಡ್‌ನ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ‘ಶುದ್ಧೀಕರಣ’ಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಸ್ಪೃಶ್ಯತೆ ಎನ್ನುವುದು ಅಪರಾಧ ಹಾಗೂ ಭಾರತೀಯರ ಗೌರವಕ್ಕೆ ಎಸಗಿದ ದ್ರೋಹ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಖಂಡನೆ ವ್ಯಕ್ತಪಡಿಸಿರುವ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಕೃತ್ಯದ ವಿರುದ್ಧ ಧ್ವನಿ ಎತ್ತಿರುವುದನ್ನು ಬೆಂಬಲಿಸಿದ್ದಾರೆ.
"ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನ್ಯಾಯ ಸಿಗಬೇಕು. ಈ ಹೀನ ಕೃತ್ಯಕ್ಕೆ ಕಾರಣರಾದವರನ್ನು ತಕ್ಷಣವೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡಿಕೊಟ್ಟಿರುವ ಸಮಾನತೆ ಮತ್ತು ಸಾರ್ವಜನಿಕ ಗೌರವದ ಹಕ್ಕಿನಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ.
ಜಾತಿ ಹಾಗೂ ಅಸ್ಪೃಶ್ಯತೆಯ ಹೆಸರಿನಲ್ಲಿ ನಡೆಯುವ ಇಂತಹ ಕೃತ್ಯಗಳು ಕಟ್ಟುನಿಟ್ಟಾಗಿ ತಡೆಯಲ್ಪಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದ್ದಾರೆ.




