ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ನಮ್ಮ ಪ್ರಜಾಪ್ರಭುತ್ವದ ಅಸಲಿ ಶಕ್ತಿ ಇರುವುದೇ ಪ್ರತಿಯೊಬ್ಬ ಪ್ರಜೆಯ ಮತದಾನದ ಹಕ್ಕನ್ನು ರಕ್ಷಿಸುವುದು ಮತ್ತು ಪ್ರತಿ ಮತವೂ ಮೌಲ್ಯಯುತವಾಗಿ ಎಣಿಕೆಯಾಗುವುದನ್ನು ಖಚಿತಪಡಿಸುವುದರಲ್ಲಿ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರತಿಪಾದಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಒತ್ತಾಯಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ 'ಇಂಡಿಯಾ' ಒಕ್ಕೂಟ ತೆಗೆದುಕೊಂಡಿರುವ ನಿರ್ಧಾರವನ್ನು ಎಂ.ಬಿ. ಪಾಟೀಲ್ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.
"ಯಾವುದೇ ಕಾರಣಕ್ಕೂ ಒಬ್ಬ ಅರ್ಹ ಮತದಾರನೂ ತನ್ನ ಹಕ್ಕಿನಿಂದ ವಂಚಿತನಾಗಬಾರದು. ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ಎತ್ತುತ್ತಿರುವ ಗಂಭೀರ ಕಳಕಳಿ ಹಾಗೂ ಪ್ರಶ್ನೆಗಳಿಗೆ ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರೇ ನೇರ ಹೊಣೆ ಹೊರಬೇಕು ಮತ್ತು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ಚುನಾವಣಾ ಆಯೋಗವು ಈ ಸವಾಲುಗಳಿಗೆ ಸೂಕ್ತ ಉತ್ತರ ನೀಡಿ ದೇಶದ ಪ್ರತಿಯೊಬ್ಬ ಮತದಾರನ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಗಳನ್ನು ನಡೆಸುವುದು ಮಾತ್ರವಲ್ಲ; ಜನರ ಆಯ್ಕೆ, ಪ್ರಶ್ನಿಸುವ ಹಕ್ಕು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವ ಹಕ್ಕನ್ನು ರಕ್ಷಿಸುವುದಾಗಿದೆ. ನಮ್ಮ ಸಂವಿಧಾನವು ಎತ್ತಿಹಿಡಿದಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಪ್ರತಿಯೊಬ್ಬ ಮತದಾರನ ಹಕ್ಕನ್ನು ರಕ್ಷಿಸಲು ನಾವು ಒಗ್ಗಟ್ಟಿನಿಂದ ಹೋರಾಡಲಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.




