ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಿಲ್ಲದೆ ಆರು ತಾಲೂಕುಗಳಲ್ಲಿ ತೀವ್ರ ಬರಗಾಲ ಆವರಿಸಿದ್ದು, ರೈತರು ಅಲ್ಪಸ್ವಲ್ಪ ಮಳೆಗೆ ದುಬಾರಿ ಬೆಲೆ ಕೊಟ್ಟು ಬೀಜ, ಗೊಬ್ಬರ ಖರೀದಿಸಿ ಬಿತ್ತಿದ ಬೆಳೆಗಳೆಲ್ಲವೂ ಕಣ್ಣೆದುರಲ್ಲೇ ಒಣಗಿ ಹೋಗಿವೆ. ಇದರೊಂದಿಗೆ ಕೊಳವೆಬಾವಿಗಳೂ ಬರಿದಾಗಿದ್ದು, ಅಡಕೆಗೂ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಈ ಎಲ್ಲಾ ಸಂಕಷ್ಟಗಳ ನಡುವೆ ರಾಜ್ಯ ಸರ್ಕಾರ ಘೋಷಿಸಿರುವ ಅಲ್ಪ ಪರಿಹಾರವು ರೈತರಿಗೆ ಮಾಡಿದ ಅಪಮಾನವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ಅಪರಿಹಾರ ಘೋಷಣೆಗೆ ಆಕ್ರೋಶ: ಬರಪೀಡಿತ ರೈತರಿಗೆ ಸರ್ಕಾರ ಘೋಷಿಸಿರುವ 2,500 ಪರಿಹಾರ ಅತ್ಯಂತ ಅಲ್ಪ ಆಗಿದ್ದು, ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶಾಸಕರ ವಿರುದ್ಧ ಕಿಡಿ: ಆಡಳಿತ ಹಾಗೂ ವಿರೋಧ ಪಕ್ಷಗಳ ಕೆಲವೇ ಕೆಲವು ಶಾಸಕರನ್ನು ಹೊರತುಪಡಿಸಿ, ಬಹುತೇಕ ಎಲ್ಲ ಶಾಸಕರು ವಿಧಾನಸಭೆಯಲ್ಲಿ ರೈತರ ಪರ ಧ್ವನಿ ಎತ್ತದೆ ಮೌನವಾಗಿರುವುದು ದುರಂತ. ಕೇವಲ ಅಧಿಕಾರಕ್ಕಾಗಿ ಪಾದಯಾತ್ರೆಗಳನ್ನು ನಡೆಸುವ ರಾಜಕಾರಣಿಗಳು, ರೈತರ ಬೆಳೆ ಸಾಲ ಮನ್ನಾ, ನೀರಾವರಿ ಯೋಜನೆಗಳ ಅನುದಾನ ಮತ್ತು ಬೆಳೆ ವಿಮೆಗಾಗಿ ಪಾದಯಾತ್ರೆ ನಡೆಸಿದ್ದರೆ ಅವರ ಕಾಳಜಿ ತಿಳಿಯುತ್ತಿತ್ತು.
ರಾಜ್ಯಪಾಲರಿಗೆ ಮನವಿ: ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಬೇಕೆಂದು ಆಗ್ರಹಿಸಿ, ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗಿದೆ.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ಕಬ್ಬಿಗೆರೆ ನಾಗರಾಜ್, ಲಿಂಗವರಟ್ಟಿ ಕಾಂತರಾಜ್, ರಾಜಶೇಖರಪ್ಪ ಮುದ್ದಾಪುರ, ಮಂಜಣ್ಣ ಬಾಗೇನಾಳು, ತಿಪ್ಪೇಸ್ವಾಮಿ ಮುದ್ದಾಪುರ, ನಾಗಣ್ಣ, ವೀರಣ್ಣ, ತಾಲೂಕ್ ಅಧ್ಯಕ್ಷ ಕಾಂತರಾಜ್, ವೆಂಕಟೇಶ್ ಹೊಳಲ್ಕೆರೆ, ಮಲ್ಲಿಕಾರ್ಜುನ ನಪ್ಪ, ಸಿದ್ದರಾಮಣ್ಣ, ಸೂರಪ್ಪ ಚಿಕ್ಕಬೆನ್ನೂರು, ಶಾಂತಮ್ಮ ಅಳಿಯೂರು, ಸಿದ್ದಣ್ಣ, ಬಸವಾನಂದ ಜಮೀನ್ದಾರ್, ಮಾರುತಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.




