ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣ ಹಾಗೂ ತನಿಖೆಯ ವೇಳೆ ದಾಖಲೆಗಳು ನಾಪತ್ತೆಯಾಗುತ್ತಿರುವ ವಿಚಾರವಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸರಣಿ ಪ್ರಶ್ನೆಗಳನ್ನು ಎತ್ತಿರುವ ಆರ್. ಅಶೋಕ್, ಉದ್ಯೋಗ ಆಕಾಂಕ್ಷಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಆತಂಕಕಾರಿ ಸಾಕ್ಷ್ಯ ನಾಶ: ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಕೆಪಿಎಸ್‌ಸಿ ಸ್ಟ್ರಾಂಗ್ ರೂಮ್‌ನ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಅಳಿಸಿ ಹಾಕಿರುವುದು ಮತ್ತು ಒಎಂಆರ್ ಪ್ರತಿಗಳನ್ನು ಸಂಗ್ರಹಿಸಿದ್ದ ಹಾರ್ಡ್ ಡಿಸ್ಕ್ ಪತ್ತೆಯಾಗದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.
ಸತ್ಯ ಮುಚ್ಚಿಹಾಕುವ ಯತ್ನ: ಪರೀಕ್ಷೆಯ ಪಾರದರ್ಶಕತೆಗೆ ಇದ್ದ ಸಿ.ಸಿ.ಟಿ.ವಿ ದೃಶ್ಯಾವಳಿಗಳು ಹಾಗೂ OMR ಹಾರ್ಡ್ ಡಿಸ್ಕ್ ನಾಪತ್ತೆಯಾಗಿರುವುದನ್ನು ನೋಡಿದರೆ, ಯಾರನ್ನು ರಕ್ಷಿಸಲು ಈ ಸಾಕ್ಷ್ಯಗಳನ್ನು ಅಳಿಸಿಹಾಕಲಾಗಿದೆ? ಇದು ಕೇವಲ ನಿರ್ಲಕ್ಷ್ಯವೇ ಅಥವಾ ವ್ಯವಸ್ಥಿತವಾಗಿ ಸತ್ಯ ಮುಚ್ಚಿಹಾಕುವ ಪ್ರಯತ್ನವೇ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿ: "ದೆಹಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೇರಿ ಪ್ರತಿಭಟನೆಯ ನಾಟಕ ಮಾಡಲು ತೋರಿಸುವ ಉಮೇದು, ಕರ್ನಾಟಕದ ಯುವಕರ ಭವಿಷ್ಯದ ವಿಷಯದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಯಾಕಿಲ್ಲ?" ಎಂದು ಸವಾಲೆಸೆದಿದ್ದಾರೆ.
ಯುವಕರ ಭವಿಷ್ಯಕ್ಕೆ ಧಕ್ಕೆ: ವರ್ಷಗಳ ಕಾಲ ಕಷ್ಟಪಟ್ಟು ಓದುವ ರಾಜ್ಯದ ಲಕ್ಷಾಂತರ ಯುವಕರ ಹಕ್ಕು ಮತ್ತು ಭವಿಷ್ಯವನ್ನು ಕಾಪಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಳೆದ ನಿರ್ಲಕ್ಷ್ಯದ ಧೋರಣೆಯನ್ನು ಜನತೆ ಕ್ಷಮಿಸುವುದಿಲ್ಲ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.




