ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ಯೋಜನೆಯ ಹೆಸರಿನಲ್ಲಿ ಕಳೆದ 26 ವರ್ಷಗಳಿಂದ ಬೃಹತ್ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ, ಯೋಜನೆಯ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜೆ.ಪಿ ಭವನದಲ್ಲಿ 'ನಥಿಂಗ್ ನೈಸ್' ಎಂಬ ಜನಪರ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ವೆಬ್‌ಸೈಟ್ ಬಿಡುಗಡೆಗೊಳಿಸಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನೈಸ್ ಸಂಸ್ಥೆಯು ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿಗೊಟ್ಟು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದೆ. ಯೋಜನೆಯ ಫ್ರೇಮ್‌ವರ್ಕ್ ಒಪ್ಪಂದದಂತೆ 5 ಟೌನ್‌ಶಿಪ್ ಹಾಗೂ 111 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸಬೇಕಿತ್ತು. ಆದರೆ, ಡಾಂಬರು ರಸ್ತೆ ನಿರ್ಮಿಸಿ ಉಲ್ಲಂಘನೆ ಎಸಗಲಾಗಿದೆ. ಅಲ್ಲದೆ ಪೆರಿಫೆರಲ್ ರಸ್ತೆಗೆ 2,193 ಎಕರೆ ಅಗತ್ಯವಿದ್ದರೂ, 554 ಎಕರೆ ಹೆಚ್ಚುವರಿ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಿಖಿಲ್ ಆರೋಪಿಸಿದರು.
ಪ್ರಮುಖ ಆಗ್ರಹಗಳು ಹಾಗೂ ಆರೋಪಗಳು:
ಟೋಲ್ ಸಂಗ್ರಹ ತಕ್ಷಣ ಬಂದ್ ಆಗಲಿ: "ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರಿಂದ ಟೋಲ್ ವಸೂಲಿ ಮಾಡುತ್ತಿರುವುದು ಎಷ್ಟು ಸರಿ? ತಕ್ಷಣವೇ ನೈಸ್ ರಸ್ತೆಯ ಟೋಲ್ ಸಂಗ್ರಹ ರದ್ದುಗೊಳಿಸಬೇಕು" ಎಂದು ಒತ್ತಾಯಿಸಿದರು.
ರೈತರಿಗೆ ಅನ್ಯಾಯ: ಭೂಮಿ ಕಳೆದುಕೊಂಡ ಶೇ.65-70 ರಷ್ಟು ರೈತರಿಗೆ 23 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ. ಮಾಜಿ ಸಚಿವ ಟಿ.ಬಿ ಜಯಚಂದ್ರ ಜಂಟಿ ಸದನ ಸಮಿತಿ ವರದಿ ಹಾಗೂ ಹೈಕೋರ್ಟ್ ಆದೇಶದಂತೆ ಸರ್ಕಾರ ಮಧ್ಯಪ್ರವೇಶಿಸಿ, ರೈತರಿಗೆ ಜಮೀನು ವಾಪಸ್ ನೀಡಬೇಕು ಅಥವಾ ಬಡ್ಡಿ ಸಮೇತ ಸೂಕ್ತ ಪರಿಹಾರ ಒದಗಿಸಬೇಕು ಎಂದು ನಿಖಿಲ್ ಆಗ್ರಹಿಸಿದರು.
ವೆಬ್‌ಸೈಟ್ ಬಿಡುಗಡೆ: ನೈಸ್ ಯೋಜನೆಯ ಅಕ್ರಮಗಳ ಸಂಪೂರ್ಣ ದಾಖಲೆಗಳು ಹಾಗೂ ಹೈಕೋರ್ಟ್ ಆದೇಶದ ಪ್ರತಿಗಳನ್ನು ಒಳಗೊಂಡ nothingnice.net ವೆಬ್‌ಸೈಟ್ ಅನ್ನು ಈ ವೇಳೆ ಲೋಕಾರ್ಪಣೆಗೊಳಿಸಲಾಯಿತು.
ಸರ್ಕಾರಕ್ಕೆ ಆಗ್ರಹ: ಸರ್ಕಾರ ತಕ್ಷಣವೇ ನೈಸ್ ಯೋಜನೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಇಲ್ಲವಾದರೆ ಜೆಡಿಎಸ್ ಶೀಘ್ರದಲ್ಲೇ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಸ್ಪಷ್ಟನೆ ನೀಡಿದ ನಿಖಿಲ್, "ನೈಸ್ ಯೋಜನೆಯನ್ನು ತಂದವರು ಹೆಚ್.ಡಿ. ದೇವೇಗೌಡರಾದರೂ, ಫ್ರೇಮ್‌ವರ್ಕ್ ಒಪ್ಪಂದ ಆಗಿದ್ದು ಜೆ.ಎಚ್. ಪಟೇಲ್ ಅವರ ಅವಧಿಯಲ್ಲಿ" ಎಂದು ಹೇಳಿದರು.
ಪ್ರಧಾನಿ ಮೋದಿ ಭೇಟಿಯ ಕುರಿತು ಮಾತನಾಡಿ, "ಅದು ಸೌಹಾರ್ದಯುತ ಭೇಟಿಯಾಗಿದ್ದು, ಎನ್ ಡಿಎ ಒಗ್ಗಟ್ಟು ಹಾಗೂ 2028ರ ಚುನಾವಣೆ ಕುರಿತು ಚರ್ಚಿಸಲಾಗಿದೆ" ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಹೆಚ್.ಎಂ. ರಮೇಶ್ ಗೌಡ, ತೂಪಲ್ಲಿ ಚೌಡರೆಡ್ಡಿ, ವಕ್ತಾರರಾದ ಗಂಗಾಧರ್ ಮೂರ್ತಿ ಹಾಗೂ ದೇವರಾಜು ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.




