ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಭಾರತೀಯ ಭಾರಿ ವಿದ್ಯುತ್ ಯಂತ್ರಗಳ ಸಂಸ್ಥೆ ತನ್ನ ಸಿಎಸ್‌ಆರ್ ಅನುದಾನದಡಿ 1 ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ನೂತನ ‘ಡಿಜಿಟಲ್ ಮೌಲ್ಯಮಾಪನ ಸೌಲಭ್ಯ’ವನ್ನು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟಿಸಿದರು.
ನೂತನ ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದ ಅವರು, "ತಂತ್ರಜ್ಞಾನ ಆಧರಿತ ವೈದ್ಯಕೀಯ ಮೂಲಸೌಕರ್ಯಗಳು ರೋಗಿಗಳಿಗೆ ದೊರೆಯುವ ಸೇವೆಯ ಗುಣಮಟ್ಟ, ಮೌಲ್ಯಮಾಪನ ಮತ್ತು ಸುಲಭ ಲಭ್ಯತೆಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ" ಎಂದು ಹೇಳಿದರು.
ಸಾರ್ವಜನಿಕ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಬಿಎಚ್‌ಇಎಲ್ ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸಿಕೊಂಡು ಅರ್ಥಪೂರ್ಣ ಕೊಡುಗೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.




