ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಪ್ರಭಾವಿ ಸಚಿವರನ್ನೇ ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮೂಲಕ ರಹಸ್ಯ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ನಡೆಸಲು ವಿಪಕ್ಷಗಳು ತೆರೆಮರೆಯಲ್ಲಿ ಸಿದ್ಧತೆ ನಡೆಸಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಎಚ್ಚರಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದರು. "ಡಿ.ಕೆ. ಶಿವಕುಮಾರ್ ಅವರೇ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸುವ ಮೂಲಕವೇ ಮುಖ್ಯಮಂತ್ರಿಯಾದರು ಎಂದು ಸ್ವತಃ ಕಾಂಗ್ರೆಸ್ನ ಕೆಲ ನಾಯಕರೇ ಚರ್ಚಿಸುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.
ಅಷ್ಟೇ ಅಲ್ಲದೆ, "ಡಿ.ಕೆ. ಶಿವಕುಮಾರ್ ಅವರು ಈಗ ಮತ್ತೆ ತಮ್ಮ ಹಳೆಯ ಕಸಬನ್ನು ಕೈಗೆತ್ತಿಕೊಂಡಿದ್ದಾರೆ. ಸ್ವಪಕ್ಷದ ಸಚಿವರನ್ನೇ ತಮ್ಮ ಹತೋಟಿಯಲ್ಲಿಡಲು ಅದೇ ಸ್ಟಿಂಗ್ ಆಪರೇಷನ್ ತಂತ್ರವನ್ನು ಬಳಸುತ್ತಿದ್ದಾರೆ" ಎಂದು ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಸಿಎಂ ಎಚ್ಚರಿಕೆ:
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ್ದ ಸಿಎಂ ಡಿ.ಕೆ. ಶಿವಕುಮಾರ್, "ಸರ್ಕಾರದ ವಿರುದ್ಧ ಎರಡು ಪ್ರತ್ಯೇಕ ತಂಡಗಳಿಂದ ಖಾಸಗಿ ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ. ಸಚಿವರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದ್ದು, ಪ್ರತಿಯೊಬ್ಬ ಸಚಿವರೂ ಹುಷಾರಾಗಿರಬೇಕು" ಎಂದು ಎಚ್ಚರಿಸಿದ್ದರು ಎನ್ನಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಹೆಚ್ಡಿಕೆ ಅವರಿಂದ ಈ ಖಾರವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.




