ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವಜನತೆಯ ಆಶೋತ್ತರಗಳು ಕರ್ನಾಟಕದ ಭವಿಷ್ಯದ ಹೊಸ ಅಧ್ಯಾಯವನ್ನು ರೂಪಿಸಲಿವೆ ಎಂದು ಪ್ರತಿಪಾದಿಸಿರುವ ರಾಜ್ಯ ಸರ್ಕಾರ, ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಮುಖ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಾರದರ್ಶಕ ಪರೀಕ್ಷಾ ವ್ಯವಸ್ಥೆಯಿಂದ ಹಿಡಿದು ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳವರೆಗೆ ಯುವಜನತೆಗೆ ಉತ್ತಮ ಭವಿಷ್ಯವನ್ನು ಕಲ್ಪಿಸಿಕೊಡುವುದು ಸರ್ಕಾರದ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ಉಪಸಮಿತಿಯ ನೇತೃತ್ವ: ಹಿರಿಯ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಈ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಸದಸ್ಯರು: ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ.
ಸಮಿತಿಯ ಕಾರ್ಯಸೂಚಿ: ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಕೈಗೆಟುಕುವ ಶಿಕ್ಷಣ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಬಲವರ್ಧನೆ, ಸೂಕ್ತ ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶಗಳು ಮತ್ತು ವಿದ್ಯಾರ್ಥಿಗಳ ಮಾನಸಿಕ ಕ್ಷೇಮಾಭಿವೃದ್ಧಿ ಕುರಿತು ಸಮಿತಿಯು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಯುವಜನರ ಕನಸುಗಳಿಗೆ ಸೂಕ್ತ ವೇದಿಕೆ ಒದಗಿಸುವುದು ಮತ್ತು ನಾಳಿನ ಅವಕಾಶಗಳಿಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಸರ್ಕಾರದ ಸ್ಪಷ್ಟ ಬದ್ಧತೆಯಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.




