ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕೈಗಾರಿಕಾ ಅಭಿವೃದ್ಧಿಯನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ ಪ್ರತಿಯೊಂದು ಭಾಗಕ್ಕೂ ವಿಸ್ತರಿಸಿ, ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ‘ಬಿಯಾಂಡ್ ಬೆಂಗಳೂರು’ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿರುವ ಈ ಯೋಜನೆಯಡಿ, ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ರಾಜ್ಯದ 5 ಪ್ರಮುಖ ನಗರಗಳನ್ನು ಗುರುತಿಸಿ ಅವುಗಳನ್ನು ಪ್ರಮುಖ ಕೈಗಾರಿಕಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಸ್ಥಳೀಯ ಯುವಜನರಿಗೆ ತಮ್ಮ ಸ್ವಂತ ಊರುಗಳಲ್ಲೇ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಸಚಿವರು ವಿವರಿಸಿದ್ದಾರೆ.
ಏಕಗವಾಕ್ಷಿ ವ್ಯವಸ್ಥೆ ಮತ್ತು ಹೂಡಿಕೆ ಉತ್ತೇಜನ: ಹೂಡಿಕೆದಾರರನ್ನು ಆಕರ್ಷಿಸಲು ವೇಗದ ಅನುಮೋದನೆ, ಡಿಜಿಟಲ್ ವ್ಯವಸ್ಥೆ ಹಾಗೂ ಕಾಲಮಿತಿಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಏಕಗವಾಕ್ಷಿ ವ್ಯವಸ್ಥೆಯಲ್ಲಿ 22 ಇಲಾಖೆಗಳು ಹಾಗೂ 119 ಸೇವೆಗಳನ್ನು ಸಂಯೋಜಿಸಲಾಗಿದ್ದು, ಈ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ತಯಾರಿಕಾ ವಲಯದಲ್ಲಿ ಬೃಹತ್ ಸಾಧನೆ:
ಕಳೆದ 3 ವರ್ಷಗಳಲ್ಲಿ ಕರ್ನಾಟಕವು ತಯಾರಿಕಾ ವಲಯದಲ್ಲಿ ₹5.58 ಲಕ್ಷ ಕೋಟಿ ಹೂಡಿಕೆ ಆಕರ್ಷಿಸುವ ಮೂಲಕ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ. ಸೆಮಿಕಂಡಕ್ಟರ್, ಏರೋಸ್ಪೇಸ್ ಮತ್ತು ಡಿಫೆನ್ಸ್, ಕ್ಲೀನ್ ಮೊಬಿಲಿಟಿ ಹಾಗೂ ಬ್ಯಾಟರಿ ಸೆಲ್ ಉತ್ಪಾದನೆಯಂತಹ ಭವಿಷ್ಯದ ಅತ್ಯಾಧುನಿಕ ಕೈಗಾರಿಕಾ ವಲಯಗಳಲ್ಲೂ ಕರ್ನಾಟಕ ತನ್ನ ನಾಯಕತ್ವವನ್ನು ಬಲಪಡಿಸುತ್ತಿದೆ ಎಂದು ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ನಗರವೂ ಹೂಡಿಕೆಯ ತಾಣವಾಗಿ ಮಾರ್ಪಟ್ಟು, ಪ್ರತಿಯೊಬ್ಬ ಯುವಕ-ಯುವತಿಗೂ ಉದ್ಯೋಗ ದೊರೆಯಬೇಕು ಎಂಬುದೇ ಸರ್ಕಾರದ ಮುಖ್ಯ ಸಂಕಲ್ಪವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.




