Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಗಗನಚುಕ್ಕಿ ಜಲಪಾತ ಅಭಿವೃದ್ಧಿಗೆ 6 ಕೋಟಿ ವೆಚ್ಚ-ಸಿಎಂ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಮುಚ್ಚುವುದು ಸಾಧ್ಯವಿಲ್ಲ. ಆದರೆ ಅದನ್ನು ಲಾಭದಾಯಕವಾಗಿಸಲು ಮಾಡಬೇಕಾದ ಕೆಲಸಗಳೇನು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಟನೆ ನೀಡಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿದರು.
 

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 113 ಕೋಟಿಗಳನ್ನು ಒದಗಿಸಿದೆ. ಅಧಿಕಾರಕ್ಕೆ ಬಂದ ಕೂಡಲೇ 50 ಕೋಟಿಗಳನ್ನು ಒದಗಿಸಿ, ನಂತರ 52  ಕೋಟಿ ರೂ.ಗಳ ವಿದ್ಯುತ್ ಶಕ್ತಿಯ ಬಾಕಿ ಬಿಲ್‌ ಅನ್ನು ಮನ್ನಾ ಮಾಡಲಾಯಿತು. ಇದಲ್ಲದೆ 10 ಕೋಟಿಯನ್ನು ಮತ್ತೆ ಒದಗಿಸಲಾಗಿದೆ. ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ನಷ್ಟವಿಲ್ಲದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಇದಕ್ಕೆ ಅಗತ್ಯವಿರುವ ಬಾಯ್ಲಿಂಗ್ ಹೌಸ್ ವ್ಯವಸ್ಥೆಯನ್ನು ಒದಗಿಸಲಾಗುವುದು.

ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಪ್ರಕೃತಿ ಸೌಂದರ್ಯವನ್ನು ಜನರು ಕಾಣಲು ಬರಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಜಲಪಾತೋತ್ಸವವನ್ನು ಆಚರಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಅನೇಕ ನದಿಗಳಿವೆ. ಕಾವೇರಿ, ಕೃಷ್ಣಾ, ತುಂಗಭದ್ರೆ, ಶರಾವತಿ ನದಿಗಳು ನಮ್ಮ ರಾಜ್ಯದ ಆರ್ಥಿಕತೆ ವೃದ್ಧಿಸಲು ಸಹಕಾರಿಯಾಗಿವೆ. ಗಗನಚುಕ್ಕಿ ಕಾವೇರಿ ನದಿ ಕವಲೊಡೆದು 300 ಅಡಿ ಎತ್ತರದಿಂದ ನೆಲಕ್ಕೆ ಬೀಳುತ್ತದೆ. ಇದು ಅತ್ಯಂತ ಸುಂದರ ಹಾಗೂ ಸೊಗಸಾದ ಪ್ರದೇಶವಾಗಿದ್ದು, ಇದು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದೆ. ಈ ವಾತಾವರಣವನ್ನು ಅನುಭವಿಸಲು ಹೆಚ್ಚು ಜನ ಬರಬೇಕು. ಇದಕ್ಕಾಗಿಯೇ ನಾವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ.



ಕಳೆದ ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಂಡ್ಯ ಜಿಲ್ಲೆಯಲ್ಲಿ ಇದಕ್ಕಾಗಿ 3,200 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಬೇಕು ಹಾಗೂ ಮಹಿಳೆಯರೂ ಸ್ವಾವಲಂಬಿಗಳಾಗಬೇಕೆಂಬ ಕಾರಣದಿಂದ ಈ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.

ಕಳೆದ ಬಾರಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಈ ಬಾರಿ 492 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಲಾಗಿದೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ಉಳಿಸಿ ಕೊಂಡಿದೆ.

ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಕಾವೇರಿ ನದಿಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ವ್ಯಾಜ್ಯ ಈಗ ಇಲ್ಲ. ಮಳೆ ಸರಿಯಾಗಿ ಆಗಿದ್ದರೆ ಮಾತ್ರ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಒದಗಿಸಬೇಕೆಂದು ತೀರ್ಮಾನವಾಗಿದೆ. ಮಳೆಯಾಗಿಲ್ಲದಿದ್ದರೆ ಸಂಕಷ್ಟ ಸೂತ್ರ ಜಾರಿಗೆ ಬಂದು, ಅದರಂತೆ ನೀರನ್ನು ಹಂಚಿಕೆ ಮಾಡಲಾಗುವುದು. ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಏಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ರಾಜಕೀಯಕ್ಕಾಗಿ ಇದನ್ನು  ಆಕ್ಷೇಪಿಸುತ್ತಿದ್ದಾರೆ. ರಾಜ್ಯವು 98 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು. ಆದರೆ ಇಂದಿನವರೆಗೆ 221 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ನಾವು ಕೊಡಬೇಕಿದ್ದ ನೀರಿಗಿಂತಲೂ 122 ಟಿಎಂಸಿ ನೀರು ಹೆಚ್ಚಾಗಿ ಹರಿದು ಹೋಗಿದೆ. ಮಳೆ ಉತ್ತಮವಾಗಿ ಆದರೆ ನೀರನ್ನು ಕೊಟ್ಟೆ ಕೊಡುತ್ತೇವೆ.

ಅದೃಷ್ಟವಶಾತ್ ನಾವು ಅಧಿಕಾರಕ್ಕೆ ಬಂದ ಮೇಲೆ ಎರಡು ವರ್ಷವೂ ಒಳ್ಳೆ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಈ ವರ್ಷ ವಿದ್ಯುತ್ ಅಭಾವ ಬರಲು ಸಾಧ್ಯವಿಲ್ಲ. ನಮಗೂ ತಮಿಳುನಾಡಿಗೂ ನೀರಿನ ವಿಷಯವಾಗಿ ವಿವಾದವೂ ಬರುವುದಿಲ್ಲ. ಮಳೆ ಸಕಾಲಕ್ಕೆ ಆದರೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ.

ಮೇಕೆದಾಟು ಯೋಜನೆ ಜಾರಿಗೆ ತರಲು ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ತಕರಾರು ಮಾಡಬಾರದು. ಮೇಕೆದಾಟು ಅಣೆಕಟ್ಟಿನಿಂದ 66 ಟಿಎಂಸಿ ನೀರನ್ನು ಶೇಖರಣೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ತಮಿಳುನಾಡು ಹಾಗೂ ಕರ್ನಾಟಕಕ್ಕೂ ಉಪಯೋಗವಾಗುತ್ತದೆ. ಮಳೆ ಬಾರದಿದ್ದಾಗ ತಮಿಳುನಾಡಿಗೆ ನೀರನ್ನು ಹರಿಸಲು ಮತ್ತು ಹೆಚ್ಚು ಮಳೆ ಬಂದಾಗ ಸಮುದ್ರ ಪಾಲಾಗುವ ನೀರನ್ನು ಸಂಗ್ರಹ ಮಾಡಲು ಅನುಕೂಲವಾಗಲಿದೆ.

ಗಗನಚುಕ್ಕಿ ಜಲಪಾತ ಅಭಿವೃದ್ಧಿಗೆ 6 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಜನ ಕೂತು ನೋಡಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಜನರು ಜಲಪಾತ ವೀಕ್ಷಿಸಲು ಬರಬೇಕು. ಕಳೆದ ಮೂರು ವರ್ಷಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಶಿವನಸಮುದ್ರ ಜಲಾಶಯದಲ್ಲಿ 1902 ರಲ್ಲಿ ಏಷ್ಯಾದಲ್ಲಿಯೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದ ಕೇಂದ್ರ ಎಂಬ ಹೆಗ್ಗಳಿಕೆಯಿದೆ.

ರಾಜ್ಯ ಇಂದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೆ ಅದಕ್ಕೆ ಶಿವನಸಮುದ್ರ ಮೂಲ ಕಾರಣ. ಪ್ರಸ್ತುತ ಕರ್ನಾಟಕಕ್ಕೆ ಅಗತ್ಯವಿರುವಷ್ಟು ವಿದ್ಯುತ್  ಉತ್ಪಾದನೆಯಾಗುತ್ತಿದ್ದು, ಅದನ್ನು ಬಳಸಿಕೊಳ್ಳುವ ಕೆಲಸವೂ ಆಗುತ್ತಿದೆ. ಉತ್ಪಾದಿಸಿದ ವಿದ್ಯುತ್ ನಿಂದ ರೈತರಿಗೆ ಉಪಯೋಗವಾಗುತ್ತಿದೆ.

ಈ ವರ್ಷ ಸುಮಾರು 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಬಿತ್ತನೆ ಆಗಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ. ಅವೆಲ್ಲಕ್ಕೂ ಕೂಡಾ ಪರಿಹಾರ ನೀಡಲಾಗುವುದು ಎಂದು ಸಿಎಂ ಹೇಳಿದರು.

ಈಗಾಗಲೇ ಮಳೆಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ, ಜಾನುವಾರುಗಳ ಪ್ರಾಣ ಹಾನಿಗೆ, ಮನೆಗಳನ್ನು ಕಳೆದುಕೊಂಡವರಿಗೆ ಜಿಲ್ಲಾಡಳಿತದಿಂದ ಪರಿಹಾರ ಕೊಡಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಇನ್ನು ಹತ್ತು ದಿನಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಆಧರಿಸಿ ಆದಷ್ಟು ಬೇಗನೆ ಬೆಳೆ ಪರಿಹಾರ ನೀಡಲಾಗುವುದು.

ಪರಿಹಾರ ನೀಡಲು ಸರ್ಕಾರದಲ್ಲಿ ಹಣದ ಕೊರತೆಯಿಲ್ಲ.  ಆದರೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ ಎಂದು ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ ಸರ್ಕಾರ 99 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಶೀಘ್ರದಲ್ಲೇ 1ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟುತ್ತೇವೆ. ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾದ ಅನುದಾನ ಸರ್ಕಾರದಲ್ಲಿ ಲಭ್ಯವಿದೆ ಎಂದು ಸಿಎಂ ತಿಳಿಸಿದರು.

ವಿರೋಧ ಪಕ್ಷದವರ ಸುಳ್ಳು ಪ್ರಚಾರದಲ್ಲಿ, ಆಪಾದನೆಗಳಲ್ಲಿ ಯಾವುದೇ ಹುರುಳಿಲ್ಲ, ಸುಳ್ಳು ಸುದ್ದಿಗಳನ್ನು ಹೇಳಿ ಜನರನ್ನು ಪ್ರಚೋದಿಸಿ ಸಮಾಜದಲ್ಲಿ ಶಾಂತಿಯನ್ನು ಕದಡುವುದೇ ಅವರ ಕೆಲಸ. ಜನರು ಇದಕ್ಕೆ ಅವಕಾಶ ನೀಡದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು.

ಸಮಾಜದಲ್ಲಿ ಜಾತಿ, ಧರ್ಮಗಳನ್ನು ಒಡೆಯುವುದು, ಜನರನ್ನು ಎತ್ತಿ ಕಟ್ಟುವುದು ವಿರೋಧಪಕ್ಷದ ಕೆಲಸ. ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ನಾವೆಲ್ಲರೂ ಮನುಷ್ಯರಾಗಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಹಾಗೂ ಸಮಾಜ ಒಡೆಯುವ ಶಕ್ತಿಗಳಿಂದ ದೂರ ಇರಬೇಕು.

ಕಳೆದ ಲೋಕಸಭಾ ಚುನಾವಣೆಯಿಂದ ಜೆಡಿಎಸ್ ಪಕ್ಷವು, ಬಿಜೆಪಿಯೊಂದಿಗೆ ಸೇರಿ ಬಿಟ್ಟಿದೆ. ಮುಂದೆ ಅದೇ ಪಕ್ಷದೊಂದಿಗೆ ವಿಲೀನವಾದರೂ ಆಶ್ಚರ್ಯವಿಲ್ಲ. ಕೇವಲ ನಮ್ಮ ಸರ್ಕಾರ ಮಾತ್ರ ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟು, ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸೌಹಾರ್ದತೆಯನ್ನು ಪ್ರತಿಪಾದಿಸುತ್ತಿದೆ.

ದ್ವೇಷ ಸಮಾಜವನ್ನು ಒಡೆಯುತ್ತದೆ, ಪ್ರೀತಿ ಮನಸುಗಳನ್ನು ಬೆಸೆಯುತ್ತದೆ. ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಲು ಸಾಧ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!