ಚಂದ್ರವಳ್ಳಿ ನ್ಯೂಸ್, ಹೊಸದಿಲ್ಲಿ:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಜಾ ಹಾಗೂ ಎಸ್ಐಆರ್ ವಿರೋಧಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮತ್ತು ಶಕ್ತಿ ಪ್ರದರ್ಶನ ನಡೆಸಿದ್ದರು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ್ ಅವರಿಗೆ ಮನವಿ ಸಲ್ಲಿಸಲು ತೆರಳಿದ್ದ ಈ ಮೆರವಣಿಗೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಆದರೆ, ಈ ಬೃಹತ್ ಪ್ರತಿಭಟನೆಯ ನಡುವೆಯೇ ಗಂಭೀರವಾದ ವಿವಾದವೊಂದು ಸೃಷ್ಟಿಯಾಗಿದೆ. ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ ಅವರು ಗರ್ಭಿಣಿ ಪತ್ರಕರ್ತೆಯೊಬ್ಬರ ಕೈಯನ್ನು ಬಲವಂತವಾಗಿ ಎಳೆದು ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನನ್ನ ಕೈಯನ್ನು ಬಲವಾಗಿ ಹಿಡಿದು ಎಳೆದರು: ಪತ್ರಕರ್ತೆಯ ನೋವು ಸುಪ್ರೀಂಕೋರ್ಟ್ ಆವರಣದಲ್ಲಿ ವರದಿಗಾರಿಕೆ ಮಾಡುತ್ತಿದ್ದ ಒನ್ ಇಂಡಿಯಾ ಸುದ್ದಿ ಸಂಸ್ಥೆಯ ಪತ್ರಕರ್ತೆ, ಮೂರು ತಿಂಗಳ ಗರ್ಭಿಣಿಯೂ ಆಗಿರುವ ರಿಚಾ ಪರಾಶರ್ ಈ ಆರೋಪ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಿಚಾ ಪರಾಶರ್, "ರಾಹುಲ್ ಗಾಂಧಿ ಅವರು ನನ್ನ ಕೈಯನ್ನು ಎಷ್ಟು ಗಟ್ಟಿಯಾಗಿ ಹಿಡಿದು ಎಳೆದರೆಂದರೆ, ನಾನು ಮಂಡಿ ಮತ್ತು ಹೊಟ್ಟೆಯ ಭಾಗ ನೆಲಕ್ಕೆ ತಗಲುವಂತೆ ಕೆಳಗೆ ಬಿದ್ದೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ನನ್ನ ವಿರುದ್ಧ ಅತ್ಯಂತ ನಿಂದನೀಯ ಮತ್ತು ಕೆಟ್ಟ ಭಾಷೆಯ ಪದಗಳನ್ನು ಬಳಸಿದ್ದಾರೆ. ಇದು ರಾಜಕೀಯ ಪಕ್ಷಗಳ ವಿಚಾರವಲ್ಲ; ನಾನು ನನ್ನ ವೃತ್ತಿಧರ್ಮ ನಿರ್ವಹಿಸುತ್ತಿದ್ದ ಸಾಮಾನ್ಯ ಪತ್ರಕರ್ತೆ. ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಈ ನಡೆ ನಿಜಕ್ಕೂ ದುರದೃಷ್ಟಕರ" ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ರಿಚಾ ಅವರ ಆರೋಗ್ಯ ವಿಚಾರಿಸಿದ್ದಾರೆ.
ಆರೋಪ ತಳ್ಳಿಹಾಕಿದ ಕಾಂಗ್ರೆಸ್: ಇದು ಬಿಜೆಪಿಯ ಸೃಷ್ಟಿ
ಈ ಗಂಭೀರ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನಿರಾಕರಿಸಿದೆ. ಮೈತ್ರಿಕೂಟದ ಯಶಸ್ವಿ ಪ್ರತಿಭಟನೆಯಿಂದ ಕಂಗಾಲಾಗಿರುವ ಆಡಳಿತಾರೂಢ ಬಿಜೆಪಿ, ರಾಹುಲ್ ಗಾಂಧಿ ಅವರ ವಿರುದ್ಧ ಕುತಂತ್ರದಿಂದ ಇಂತಹ ಸುಳ್ಳು ಮತ್ತು ಅಪಪ್ರಚಾರಗಳನ್ನು ಹಬ್ಬಿಸುತ್ತಿದೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಘಟನೆಯಲ್ಲಿ ರಾಹುಲ್ ಗಾಂಧಿ ಅವರ ಯಾವುದೇ ತಪ್ಪಿಲ್ಲ ಮತ್ತು ಅಂತಹ ಅಹಿತಕರ ಘಟನೆ ನಡೆದೇ ಇಲ್ಲ ಎಂದು ಪಕ್ಷವು ಸಮರ್ಥಿಸಿಕೊಂಡಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಕುರಿತು ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು, ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸಿದೆ.



