ಚಂದ್ರವಳ್ಳಿ ನ್ಯೂಸ್, ಲಖನೌ:
ಪತ್ನಿ ತನ್ನ ಮಾಜಿ ಪ್ರಿಯಕರನ ಜೊತೆ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ಜಗಳವಾಡುವ ಬದಲಿಗೆ, ಆಕೆಯ ಇಚ್ಛೆಯನ್ನು ಗೌರವಿಸಿ ಪ್ರಿಯಕರನ ಜೊತೆಯೇ ವಿವಾಹ ಮಾಡಿಸಿದ ಅಪರೂಪದ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಲಖನೌನ ಮಾಲಿಹಾಬಾದ್ ಪ್ರದೇಶದ ಮಹಿಳೆಯೊಬ್ಬರು ಸುಮಾರು ಒಂದು ವರ್ಷದ ಹಿಂದೆ ಪಿಆರ್‌ಡಿ ಜವಾನನನ್ನು ವಿವಾಹವಾಗಿದ್ದರು. ಆದರೆ, ನಾಲ್ಕು ದಿನಗಳ ಹಿಂದೆ ಪತಿ ಮನೆಯಿಂದ ಹೊರಹೋದ ಆಕೆ, ತನ್ನ ಮಾಜಿ ಪ್ರಿಯಕರನ ಜೊತೆ ಹರ್ದೋಯಿಗೆ ತೆರಳಿದ್ದರು. ಮಹಿಳೆ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆಕೆಯ ಸ್ಥಳವನ್ನು ಪತ್ತೆಹಚ್ಚಿ ಇಬ್ಬರನ್ನೂ ವಾಪಸ್ ಕರೆತಂದು, ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿದರು.
ಈ ವೇಳೆ ಮಹಿಳೆ, ತಾನು ಪತಿಯೊಂದಿಗೆ ಮುಂದುವರಿಯಲು ಬಯಸುವುದಿಲ್ಲ ಬದಲಾಗಿ ಮಾಜಿ ಪ್ರಿಯಕರನ ಜೊತೆ ಜೀವನ ನಡೆಸಲು ಇಚ್ಛಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಶಾಲಾ ದಿನಗಳ ಪ್ರೇಮ ಮತ್ತು ಮದುವೆ:
ಮಹಿಳೆ ಹಾಗೂ ಆಕೆಯ ಮಾಜಿ ಪ್ರಿಯಕರ ಇಬ್ಬರೂ ಹಿಂದೆ ಒಂದೇ ಶಾಲೆಯಲ್ಲಿ ಓದುತ್ತಿದ್ದು, ಮದುವೆಗೂ ಮುನ್ನವೇ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕುಟುಂಬಸ್ಥರ ಒತ್ತಡದ ಹಿನ್ನೆಲೆಯಲ್ಲಿ ಆಕೆ ಪಿಆರ್‌ಡಿ ಜವಾನನನ್ನು ಮದುವೆಯಾಗಬೇಕಾಯಿತು. ಮದುವೆಯಾದ ಬಳಿಕವೂ ಆಕೆ ಮಾಜಿ ಪ್ರಿಯಕರನೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ. ಪತ್ನಿ ತಾನಿರುವಿಕೆಯನ್ನು ಬಯಸುತ್ತಿಲ್ಲ ಎಂಬುದು ಮನವರಿಕೆಯಾದ ಬಳಿಕ ಪತಿ, ಆಕೆಯನ್ನು ಬಲವಂತವಾಗಿ ತನ್ನೊಂದಿಗೆ ಉಳಿಸಿಕೊಳ್ಳಲು ನಿರಾಕರಿಸಿದರು. ಬದಲಾಗಿ ಆಕೆಯ ನಿರ್ಧಾರವನ್ನೇ ಗೌರವಿಸಲು ನಿರ್ಧರಿಸಿದರು.
ದೇವಸ್ಥಾನದಲ್ಲಿ ಪ್ರಿಯಕರನ ಜೊತೆ ಮದುವೆ:
ಅದರಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಸ್ಥಳೀಯ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿಸಲಾಯಿತು. ಇಬ್ಬರೂ ಪರಸ್ಪರ ಹಾರ ಬದಲಿಸಿಕೊಂಡು, ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದರು. ಮದುವೆಯ ಬಳಿಕ ಸ್ವತಃ ಪಿಆರ್‌ಡಿ ಜವಾನನೇ ತನ್ನ ಮಾಜಿ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಸಂತೋಷದಿಂದ ಕಳುಹಿಸಿಕೊಟ್ಟಿದ್ದಾರೆ. ಮಾಲಿಹಾಬಾದ್ ಪ್ರದೇಶದ ನಿವಾಸಿಗಳಾಗಿರುವ ಇವರ ಈ ವಿಶಿಷ್ಟ ಪ್ರಕರಣವು ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪತಿಯ ಈ ವಿಶಾಲ ಹೃದಯದ ನಡೆ ಜನರ ಗಮನ ಸೆಳೆದಿದೆ.




