ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಾನುಕುಂಟೆ ರೈಲ್ವೆ ನಿಲ್ದಾಣದ ಯಾರ್ಡ್ನಲ್ಲಿ ನಿಲ್ಲಿಸಲಾಗಿದ್ದ ರೈಲು ಬೋಗಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಮೂರು ಬೋಗಿಗಳು ಹೊತ್ತಿ ಉರಿದಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಿಗ್ಗೆ ಯಾರ್ಡ್ನಲ್ಲಿ ಇದ್ದಕ್ಕಿದ್ದಂತೆ ರೈಲು ಬೋಗಿಗಳಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ತೀವ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಬೆಂಕಿ ನಂತರ ವೇಗವಾಗಿ ಹರಡಿಕೊಂಡ ಪರಿಣಾಮ ಮೂರು ಬೋಗಿಗಳಿಗೆ ಬೆಂಕಿ ತಗುಲಿದ್ದು, ಅವುಗಳಲ್ಲಿ ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ತೀವ್ರವಾಗಿ ಹಾನಿಗೊಳಗಾಗಿವೆ.
ಅಣಕು ಕಾರ್ಯಾಚರಣೆಗೆ ಬಳಸುತ್ತಿದ್ದ ಬೋಗಿಗಳು:
ರೈಲ್ವೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಬೆಂಕಿಗಾಹುತಿಯಾದ ಈ ರೈಲು ಬೋಗಿಗಳನ್ನು ಇಲಾಖೆಯ ಅಣಕು ಅಗ್ನಿ ಅವಘಡ ಕಾರ್ಯಾಚರಣೆಗಳ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಈ ಬೋಗಿಗಳು ಯಾವುದೇ ಚಾಲನೆಯಲ್ಲಿರುವ ರೈಲು ಹಳಿಗಳ ಮೇಲಿರಲಿಲ್ಲ ಮತ್ತು ಹಲವು ದಿನಗಳಿಂದ ಯಾರ್ಡ್ನಲ್ಲಿ ನಿಲ್ಲಿಸಲಾಗಿತ್ತು. ಅಲ್ಲದೆ, ಘಟನೆ ಸಂಭವಿಸಿದ ಸಮಯದಲ್ಲಿ ಬೋಗಿಗಳ ಒಳಗೆ ಯಾರೂ ಇರಲಿಲ್ಲವಾದ್ದರಿಂದ ದೊಡ್ಡ ಮಟ್ಟದ ಅಪಾಯ ತಪ್ಪಿದೆ.
ಘಟನಾ ಸ್ಥಳಕ್ಕೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ಯಾವುದಾದರೂ ತಾಂತ್ರಿಕ ದೋಷ ಕಾರಣವೇ ಅಥವಾ ಬೇರೆ ಏನಾದರೂ ಕಾರಣವಿFದೆಯೇ ಎಂಬುದು ಇಲಾಖೆಯ ತನಿಖೆಯಿಂದಷ್ಟೇ ಹೊರಬರಬೇಕಿದೆ. ಸದ್ಯ ರೈಲ್ವೆ ಅಧಿಕಾರಿಗಳು ಈ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದು, ಪರಿಶೀಲನೆ ಮುಂದುವರೆದಿದೆ.



