ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ರೈತರಿಗೆ ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರಗಳನ್ನು ಒದಗಿಸುವ ಉದ್ದೇಶದಿಂದ 2026-27ನೇ ಸಾಲಿನ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ
ಜಿಲ್ಲೆಯಲ್ಲಿ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು ವೈಯಕ್ತಿಕ ಫಲಾನುಭವಿಗಳಡಿ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ವರ್ಗ, ಸಂಘ-ಸಂಸ್ಥೆಗಳು ಮತ್ತು ರೈತ ಉತ್ಪಾದಕ ಕಂಪನಿಗಳಿಂದ ಕಂಬೈನ್ಡ್ ಹಾರ್ವೆಸ್ಟರ್ ಹಬ್ ಸ್ಥಾಪನೆಗಾಗಿ ಅರ್ಜಿ ಕೋರಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ವೈಯಕ್ತಿಕ ಫಲಾನುಭವಿಗಳ ಅಡಿಯಲ್ಲಿ ಸಾಮಾನ್ಯ ವರ್ಗಕ್ಕೆ ಒಂದು ಹಾಗೂ ಪರಿಶಿಷ್ಟ ಜಾತಿ ವರ್ಗಕ್ಕೆ ಒಂದು ಸೇರಿ ಒಟ್ಟು ಎರಡು ಘಟಕಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಈ ಯಂತ್ರಗಳನ್ನು ತಮ್ಮ ಬೆಳೆ ಒಕ್ಕಣೆಗೆ ಬಳಸಿಕೊಳ್ಳುವುದಲ್ಲದೆ, ಇತರ ರೈತರಿಗೆ ಬಾಡಿಗೆಗೆ ನೀಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದಾಗಿದೆ. ಬೆಳೆಯ ವಿಧ ಹಾಗೂ ಕಟಾವು ಅವಧಿಯನ್ನು ಆಧರಿಸಿ ಕಾರಿಡಾರ್ ಮಾದರಿಯಲ್ಲಿ ಈ ಹಬ್‍ಗಳನ್ನು ಸ್ಥಾಪಿಸಲಾಗುತ್ತದೆ.
ನಿಗದಿಪಡಿಸಿದ ಗರಿಷ್ಠ ಸಹಾಯಧನವನ್ನು ‘ಕ್ರೆಡಿಟ್ ಲಿಂಕ್ಡ್ ಬ್ಯಾಕ್ ಎಂಡೆಡ್ ಸಬ್ಸಿಡಿ' ಮೂಲಕ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ, ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸಾಲದ ನೆರವು ಹಾಗೂ ಶೇ.3 ರಷ್ಟು ಬಡ್ಡಿ ರಿಯಾಯಿತಿ ಸೌಲಭ್ಯವನ್ನು ಪಡೆಯಲು ಅವಕಾಶವಿದೆ.
ಆಸಕ್ತರು ಸಂಬಂಧಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಇದೇ ಆಗಸ್ಟ್ 05 ರಿಂದ ಆಗಸ್ಟ್ 20 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಸಹಾಯಕ ಕೃಷಿ ನಿರ್ದೇಶಕರು ಸ್ವೀಕೃತವಾಗುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಉಪ ಕೃಷಿ ನಿರ್ದೇಶಕರ ಮುಖಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ'ಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.



