ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಅಕ್ಟೋಬರ್ 5 ರಿಂದ 11ರವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ‘ಪ್ರತಿಭಟನಾ ಸಪ್ತಾಹ’ದ ಅಂಗವಾಗಿ ಸೋಮವಾರ ಚಿತ್ರದುರ್ಗದಲ್ಲಿ ಜಿಲ್ಲಾಮಟ್ಟದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡರು, ಕಳೆದ 9 ವರ್ಷಗಳಿಂದ ಕೇವಲ 1500 ರೂ. ಮಾತ್ರ ಗೌರವಧನ ಹೆಚ್ಚಳವಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆಲೆ ಏರಿಕೆಗೆ ತಕ್ಕಂತೆ ವೇತನ ಹೆಚ್ಚಾಗದಿರುವುದು ಆಶಾ ಕಾರ್ಯಕರ್ತೆಯರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ ಹಾಗೂ ಗೌರವಧನ ಸೇರಿ ಒಟ್ಟು ಮಾಸಿಕ ರೂ. 15,000 ನಿಗದಿಪಡಿಸಬೇಕು.
ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್ ಒದಗಿಸಬೇಕು ಮತ್ತು 'ಸಮಸ್ತ' ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕು.
ಪ್ರತಿ ತಿಂಗಳು ತಪ್ಪದೆ ಪ್ರೋತ್ಸಾಹಧನ ಮತ್ತು ಗೌರವಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರ ಪಿ.ಎಚ್.ವಾರ್‌ಕ್ಲೈಮ್‌ಮತ್ತು ರಿಲೀಸ್‌ವಿವರಗಳ ಸಾಫ್ಟ್‌ಕಾಪಿ ನೀಡಬೇಕು.
ಪ್ರತಿಭಟನೆಯ ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆಕಾಶ್ ಅವರಿಗೆ ಹಕ್ಕುಒತ್ತಾಯಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಿಇಒ ಅವರು, ಅಕ್ಟೋಬರ್ 14ರಂದು ಜಿಲ್ಲಾ ಆರೋಗ್ಯಧಿಕಾರಿಗಳು ಹಾಗೂ ಆರ್‌ಸಿಎಚ್‌ಸಮಕ್ಷಮದಲ್ಲಿ ಆಶಾ ಕಾರ್ಯಕರ್ತೆಯರ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಸಭೆ ನಿಗದಿಪಡಿಸುವುದಾಗಿ ಭರವಸೆ ನೀಡಿದರು.



