ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನ ಸಂಘಟನಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಿಗೆ ಹೊಸ ಉಸ್ತುವಾರಿ ಹಾಗೂ ಸಹ-ಉಸ್ತುವಾರಿಗಳನ್ನು ನೇಮಕ ಮಾಡಿದೆ. ಇದರ ಬೆನ್ನಲ್ಲೇ, ಇದುವರೆಗೂ ರಾಜ್ಯ ಉಸ್ತುವಾರಿಯಾಗಿದ್ದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಬದಲಾಯಿಸಿ, ಅವರ ಸ್ಥಾನಕ್ಕೆ ಹರೀಶ್ ದ್ವಿವೇದಿ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ಹೈಕಮಾಂಡ್‌ನ ಈ ನಿರ್ಧಾರವನ್ನು ಸ್ವಾಗತಿಸಿರುವ ಪಕ್ಷದ ಹಿರಿಯ ಶಾಸಕ ಹಾಗೂ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, "ಲೇಟ್ ಆದರೂ ಬಿಜೆಪಿ ಹೈಕಮಾಂಡ್ ನಿರ್ಧಾರ ಸರಿಯಾಗಿಯೇ ಇದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ರಾಧಾ ಮೋಹನ್ ದಾಸ್ ಬದಲಾವಣೆಗೆ ಮುಖ್ಯವಾಗಿ ಎರಡು ಕಾರಣಗಳಿರಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.
ರಾಧಾ ಮೋಹನ್ ದಾಸ್ ಬದಲಾವಣೆಗೆ ಯತ್ನಾಳ್ ಹೇಳಿದ ಎರಡು ಪ್ರಮುಖ ಕಾರಣಗಳು.
1. ಏಕಪಕ್ಷೀಯ ಕಾರ್ಯವೈಖರಿ: "ಆರಂಭದಲ್ಲಿ ರಾಧಾ ಮೋಹನ್ ದಾಸ್ ಅವರು ಎಲ್ಲರ ಅಭಿಪ್ರಾಯಗಳನ್ನು ಆಲಿಸುತ್ತಾ ತಟಸ್ಥರಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ಸಂಪೂರ್ಣವಾಗಿ ಯಡಿಯೂರಪ್ಪ ಕುಟುಂಬದ ಬೆಂಬಲಕ್ಕೆ ನಿಂತು ಏಕಪಕ್ಷೀಯವಾಗಿ ಕೆಲಸ ಮಾಡಿದರು. ಇದು ರಾಜ್ಯದ ಅನೇಕ ಮುಖಂಡರಿಗೆ ಹಾಗೂ ತಳಮಟ್ಟದ ಕಾರ್ಯಕರ್ತರಿಗೆ ತೀವ್ರ ಬೇಸರ ತಂದಿತ್ತು" ಎಂದು ಯತ್ನಾಳ್ ಆರೋಪಿಸಿದ್ದಾರೆ.
2. ವರಿಷ್ಠರಿಗೆ ತಲುಪಿದ ಹೊಂದಾಣಿಕೆ ರಾಜಕೀಯದ ದೂರು: ವಿಜಯೇಂದ್ರ ಪರವಾಗಿ ರಾಧಾ ಮೋಹನ್ ದಾಸ್ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಸ್ಪಷ್ಟ ಸಂದೇಶ ಬಿಜೆಪಿ ವರಿಷ್ಠರಿಗೂ ತಲುಪಿರಬೇಕು. ಹಾಗಾಗಿಯೇ ವರಿಷ್ಠರು ಈ ಮಹತ್ವದ ಬದಲಾವಣೆ ಮಾಡಿರಬಹುದು ಎಂಬುದು ನನ್ನ ಅಭಿಪ್ರಾಯ ಎಂದು ಯತ್ನಾಳ್ ತಿಳಿಸಿದ್ದಾರೆ.
ವಿಜಯೇಂದ್ರ ಹಾಗೂ ಆರ್.ಅಶೋಕ್ ವಿರುದ್ಧ ವಾಗ್ದಾಳಿ: ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಗಳ ಬಗ್ಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಬಿ.ವೈ. ವಿಜಯೇಂದ್ರ ಮತ್ತು ಆರ್.ಅಶೋಕ್ ನಡೆ ವಿರುದ್ಧ ಹರಿಹಾಯ್ದಿದ್ದಾರೆ.
"ವಿಧಾನಮಂಡಲದ ಅಧಿವೇಶನದ ಒಳಗೆ ಮತ್ತು ಹೊರಗೆ ವಿಜಯೇಂದ್ರ ಹಾಗೂ ಆರ್.ಅಶೋಕ್ ನಡೆಸುತ್ತಿರುವ ಪ್ರತಿಭಟನೆಗಳು ಕೇವಲ ಐವಾಷ್ ಅಷ್ಟೇ. ಡಿ.ಕೆ. ಶಿವಕುಮಾರ್ ಅವರ ಅಣತಿಯಂತೆ ಇವರಿಬ್ಬರು ಕೆಲಸ ಮಾಡುತ್ತಿದ್ದು, ಇವರದ್ದು ಸಂಪೂರ್ಣವಾಗಿ ಹೊಂದಾಣಿಕೆ ರಾಜಕೀಯವಾಗಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹೊಸ ಉಸ್ತುವಾರಿ ಹರೀಶ್ ದ್ವಿವೇದಿ ಅವರ ನೇಮಕದೊಂದಿಗೆ ರಾಜ್ಯ ಬಿಜೆಪಿಯಲ್ಲಿ ಆಂತರಿಕ ರಾಜಕೀಯ ಮತ್ತಷ್ಟು ಚುರುಕು ಪಡೆದುಕೊಳ್ಳುವ ಸಾಧ್ಯತೆಯಿದೆ.




