Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಬಿಜೆಪಿಯದು ಜನಾಕ್ರೋಶದ ಯಾತ್ರೆಯಲ್ಲ ಭ್ರಷ್ಟರ ಯಾತ್ರೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನಾಕ್ರೋಶ ಯಾತ್ರೆ ಕೈಗೊಂಡಿರುವ ರಾಜ್ಯ ಬಿಜೆಪಿ
ನಾಯಕರಿಗೆ ನಾನು ಶುಭ ಕೋರುತ್ತೇನೆ. ಒಂದು ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ವೈಫಲ್ಯ ಮತ್ತು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲಾಗದ ಮನೆಮುರುಕುತನದ ಬಗ್ಗೆ ಆಕ್ರೋಶಗೊಂಡಿರುವ ರಾಜ್ಯದ ಜನರ ಮನಸ್ಸು ಅರಿಯಲು ಈ ಯಾತ್ರೆ ನೆರವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಇಷ್ಟೊಂದು ಅಸಮರ್ಥ, ನಿರ್ಲಜ್ಜ ಮತ್ತು ಜನವಿರೋಧಿ ವಿರೋಧ ಪಕ್ಷವನ್ನು ರಾಜ್ಯ ಎಂದೂ ಕಂಡಿಲ್ಲ. ಸ್ವಪಕ್ಷೀಯರೇ ಆರೋಪಿಸುವಂತೆ ‘’ಪೇಮೆಂಟ್ ಸೀಟ್’’ ನಲ್ಲಿ ಕೂತಿರುವ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ? ನಮ್ಮನ್ನು ಪ್ರಶ್ನಿಸುವ ಮೊದಲು ಶಾಸಕ ಬಸನಗೌಡ ಯತ್ನಾಳ್ ಅವರು ಕಳೆದ ಎರಡು ವರ್ಷಗಳಿಂದ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ದಮ್ಮು ತಾಕತ್ ತೋರಿಸಲಿ ಎಂದು ಸಿಎಂ ತಾಕೀತು ಮಾಡಿದರು.

ವಿಜಯೇಂದ್ರ ವಿರುದ್ಧ ಸ್ವಪಕ್ಷೀಯರು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳು ಅವರ ಪಕ್ಷದ ಹೈಕಮಾಂಡಿಗೂ ಮನವರಿಕೆಯಾದಂತಿದೆ. ಪಕ್ಷದೊಳಗಿದ್ದು ಮಾಡುವ ಆರೋಪಗಳಿಂದ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರಗೆ ಹಾಕಿ, ಅವರಿಂದ ಈಗ ಇನ್ನಷ್ಟು ಆರೋಪಗಳನ್ನು ಮಾಡಿಸುತ್ತಿದೆ. ಅಂತಿಮವಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವುದೇ ಬಿಜೆಪಿ ಹೈಕಮಾಂಡ್ ಉದ್ದೇಶವಾಗಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು. ಇದಕ್ಕಾಗಿ ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಸದುದ್ದೇಶ ಖಂಡಿತ ಈ ಯಾತ್ರೆಗೆ ಇಲ್ಲ.

ವಿಜಯೇಂದ್ರ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರದ್ದು ಮಾತ್ರವಲ್ಲ ರಾಜ್ಯದ ಜನತೆಯ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಜೆಟ್‌ನ 51,000 ಕೋಟಿ ರೂಪಾಯಿ ಹಣ ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿದ್ದು, ಅವರೆಲ್ಲರೂ ಸಂತೃಷ್ಠರಾಗಿದ್ದಾರೆ. ಈಗ ಅವರು ಬೀದಿಗೆ ಬಂದು ನಮ್ಮ ಪರ ಘೋಷಣೆ ಹಾಕದೆ ಇರಬಹುದು, ಆದರೆ ಅವರೆಲ್ಲರ ಆಶೀರ್ವಾದ ನಮ್ಮ ಸರ್ಕಾರದ ಪರವಾಗಿದೆ. ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಬಂದಿರುವ ಭಾರತೀಯ ಜನತಾ ಪಕ್ಷದ ಬಡವರು ಮತ್ತು ಮಹಿಳಾ ವಿರೋಧಿ ಧೋರಣೆಯನ್ನು ಅರ್ಥಮಾಡಿಕೊಳ್ಳುವಷ್ಟು ಜನ ಪ್ರಜ್ಞಾವಂತರಾಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಭ್ರಷ್ಟರಯಾತ್ರೆ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿಫಲಗೊಳಿಸುವ ಏಕೈಕ ಉದ್ದೇಶದಿಂದ ರಾಜ್ಯದ ಕರ್ನಾಟಕ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಜೊತೆ ಷಾಮೀಲಾಗಿ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ತೆರಿಗೆ ಪಾಲು ಮತ್ತು ಅನುದಾನಕ್ಕೆ ಕತ್ತರಿ ಹಾಕಿಸಿದ್ದಾರೆ. ರಾಜ್ಯದ ಜನ ತಮ್ಮ ಬೆವರಿನ ಗಳಿಕೆಯಿಂದ ನೀಡುತ್ತಿರುವ ಐದು ಲಕ್ಷ ಕೋಟಿ ರೂಪಾಯಿಗಳಷ್ಟು ತೆರಿಗೆ ಹಣದಲ್ಲಿ ಕೇವಲ 60,000 ಕೋಟಿ ರೂಪಾಯಿ ಮಾತ್ರ ವಾಪಸು ನೀಡುತ್ತಿರುವ ಅನ್ಯಾಯದ ಬಗ್ಗೆ ಆಕ್ರೋಶಗೊಂಡಿದ್ದಾರೆ. ಬಿಜೆಪಿ ಪಕ್ಷದ ಯಾತ್ರೆಯ ಸಮಯದಲ್ಲಿ ಈ ಆಕ್ರೋಶದ ಬಿಸಿ ಕೂಡಾ ಬಿಜೆಪಿ ನಾಯಕರಿಗೆ ತಟ್ಟಲಿದೆ.

ಕರ್ನಾಟಕದ ಜನರ ಹಿತರಕ್ಷಣೆಯ ಕಿಂಚಿತ್ತಾದರೂ ಕಾಳಜಿ ಈ ಬಿಜೆಪಿ ನಾಯಕರಿಗೆ ಇರುವುದಾದರೆ ಮೊದಲು ಇವರು ಪ್ರಧಾನಮಂತ್ರಿ ನಿವಾಸದ ಎದುರು ಹೋಗಿ ಪ್ರತಿಭಟನೆ ನಡೆಸಬೇಕು. ಕರ್ನಾಟಕವನ್ನು ಶತ್ರುರಾಜ್ಯದಂತೆ ನೋಡುತ್ತಿರುವ ನರೇಂದ್ರ ಮೋದಿ ಸರ್ಕಾರ ತೆರಿಗೆ ಪಾಲು, ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿರುವುದು ಮಾತ್ರವಲ್ಲ ಈಗ ಕೇಂದ್ರದಲ್ಲಿ ಕರ್ನಾಟಕದ ದನಿಯನ್ನು ಕುಗ್ಗಿಸಬೇಕೆಂಬ ದುಷ್ಟ ಉದ್ದೇಶದಿಂದ ಕ್ಷೇತ್ರ ಮರುವಿಂಗಡಣೆಯನ್ನು ಮಾಡಲು ಹೊರಟಿದೆ. ಇದರ ವಿರುದ್ಧ ದನಿ ಎತ್ತಬೇಕಾಗಿರುವ ರಾಜ್ಯದಿಂದ ಆರಿಸಿಹೋಗಿರುವ ಭಾರತೀಯ ಜನತಾ ಪಾರ್ಟಿಯ ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೇಂದ್ರದ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ವೈಯಕ್ತಿಕವಾಗಿ ನಾನು ರಾಜ್ಯದಲ್ಲಿ ರಚನಾತ್ಮಕವಾಗಿ ಕಾರ್ಯನಿರ್ವಹಿಸುವ ಸಮರ್ಥ ವಿರೋಧ ಪಕ್ಷ ಇರಬೇಕೆಂದು ಬಯಸುವವನು. ಬಿಜೆಪಿಯವರಂತೆ ರಾಜ್ಯ ಬಿಜೆಪಿ ಮುಕ್ತ ಆಗಬೇಕೆಂದು ಬಯಸುವಷ್ಟು ಕೆಟ್ಟ ಮನಸ್ಸು ನನಗಿಲ್ಲ. ನಮ್ಮ ಆಡಳಿತದಲ್ಲಿ ತಿಳಿದೋ, ತಿಳಿಯದೆಯೋ ತಪ್ಪುಗಳಾಗಿದ್ದರೆ ಅದನ್ನು ನಮ್ಮ ಗಮನಕ್ಕೆ ತರುವುದು ವಿರೋಧ ಪಕ್ಷದ ಮುಖ್ಯ ಕರ್ತವ್ಯವಾಗಿದೆ. ಆದರೆ ರಾಜ್ಯದಲ್ಲಿರುವ ವಿರೋಧ ಪಕ್ಷ ತನ್ನ ಒಳಜಗಳ ಮತ್ತು ಅಸಾಮರ್ಥ್ಯದಿಂದ ರಾಜ್ಯದ ಜನತೆ ಎದುರು ನಗೆಪಾಟಲಿಗೀಡಾಗಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!