ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಸಾಸಲು ಹೋಬಳಿಹಳ್ಳಿಗಾಡಿನ ಕಡೆ ಸಂಚರಿಸುವ ಸರ್ಕಾರಿ ಬಸ್ (ಕೆಎಸ್ಆರ್ಟಿಸಿ) ಪದೇಪದೇ ಮಾರ್ಗ ಮಧ್ಯದಲ್ಲೇ ಕೆಟ್ಟು ನಿಲ್ಲುವ ಸಮಸ್ಯೆ ಮುಂದುವರಿದಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪ್ರಯಾಣಿಕರು ಪರದಾಡುವಂತಾಗಿದೆ.
ದೊಡ್ಡಬಳ್ಳಾಪುರ-ಹೊಸಹಳ್ಳಿ-ಕೊಟ್ಟಿಗೆಮಾಚೇನಹಳ್ಳಿ ಮಾರ್ಗದಲ್ಲಿ ದೊಡ್ಡಹಳ್ಳದಲ್ಲಿ ಸರ್ಕಾರಿ ಬಸ್‌ವೊಂದು ಮಾರ್ಗಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡು ರಸ್ತೆಯಲ್ಲೇ ನಿಂತು ಪರದಾಡುವಂತಾಯಿತು.
ಬೆಳಗಿನ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ತುಂಬಾ ತೊಂದರೆಯಾಗುತ್ತಿದ್ದರು ಇದರ ಬಗ್ಗೆ ಯಾರು ಗಮನಹರಿಸುತ್ತಿಲ್ಲ.
ಗ್ರಾಮೀಣ ಭಾಗದಿಂದ ನಗರ ಅಥವಾ ಪಟ್ಟಣಗಳಿಗೆ ಬರುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜು ತಲುಪಲು ಸಾಧ್ಯವಾಗದೆ ಪ್ರಮುಖ ತರಗತಿಗಳನ್ನು ಕಳೆದುಕೊಳ್ಳುತ್ತಾರೆ.ಪರೀಕ್ಷೆಗಳಿಗೆ ವಿಳಂಬ ವಿಶೇಷವಾಗಿ ಮಧ್ಯವಾರ್ಷಿಕ ಅಥವಾ ವಾರ್ಷಿಕ ಪರೀಕ್ಷೆಗಳ ಸಮಯದಲ್ಲಿ ಬಸ್ ಕೆಟ್ಟು ನಿಂತರೆ, ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಇದೆ ರೀತಿ ಮಾರ್ಗದಲ್ಲಿ ಪದೇ ಪದೇ ಬಸ್‌ಗಳು ಕೆಟ್ಟು ನಿಲ್ಲುತ್ತಿದ್ದರೂ ಸಾರಿಗೆ ಇಲಾಖೆ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿರುವ ಗ್ರಾಮಸ್ಥರು, ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ನೂರಾರು ಪ್ರಯಾಣಿಕರು ಅವಲಂಬಿಸಿರುವ ಈ ಮಾರ್ಗದ ಸಾರಿಗೆ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿ, ಬಸ್‌ಗಳ ನಿರ್ವಹಣೆ ಹಾಗೂ ಸೇವೆಯ ಗುಣಮಟ್ಟ ಸುಧಾರಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.




