ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಕಾರಾಗೃಹ ಇಲಾಖೆ ಆದೇಶ ಹೊರಡಿಸಿದೆ.
ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಶುಕ್ರವಾರ ಈ ಆದೇಶ ನೀಡಿದ್ದಾರೆ. ಈ ಕುರಿತು ಬೆಳಗಾವಿಯ ಹಿಂಡಲಗಾ ಜೈಲಿಗೆ ಅಧಿಕೃತ ಇ-ಮೇಲ್ ಮೂಲಕ ಮಾಹಿತಿ ರವಾನಿಸಲಾಗಿದ್ದು, ಎಸ್ಕಾರ್ಟ್ ಮೂಲಕ ಶೀಘ್ರದಲ್ಲೇ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಜೈಲು ಮುಖ್ಯ ಅಧೀಕ್ಷಕರಿಗೆ ಸೂಚಿಸಲಾಗಿದೆ.
ಇತ್ತೀಚೆಗೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಹಾಗೂ ಮತ್ತೊಬ್ಬ ವಿಚಾರಣಾಧೀನ ಕೈದಿ ಬಳಿ ಮೊಬೈಲ್ ಫೋನ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿದ್ದು ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಿಸಿಬಿ ಪೊಲೀಸರು ಕೈದಿಗಳಿಂದ ಮೊಬೈಲ್ ಫೋನ್, ಚಾರ್ಜರ್, ಪೆನ್ ಡ್ರೈವ್ ಹಾಗೂ ನೋಟ್‌ಬುಕ್ ಅನ್ನು ವಶಪಡಿಸಿಕೊಂಡಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಈಗ ಅವರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡಲಾಗುತ್ತಿದೆ.




