ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಹಲವು ವರ್ಷಗಳಿಂದ ನಿರಂತರವಾಗಿ ಸಮಾಜ ಹಾಗೂ ರಂಗಭೂಮಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಮುಖ್ಯಮಂತ್ರಿ ಚಂದ್ರು ಅವರಿಗೆ ಈಗ 73 ವರ್ಷ ತುಂಬಿದ್ದರೂ ಅವರ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ. ನಾನು ಎಂಟು ವರ್ಷ ಮುಖ್ಯಮಂತ್ರಿ ಆಗಿದ್ದೆ, ಈಗ ಮಾಜಿ ಮುಖ್ಯಮಂತ್ರಿಯಾಗಿದ್ದೇನೆ. ಆದರೆ ಚಂದ್ರು ಅವರು ಮಾತ್ರ ಎಂದಿಗೂ ಮಾಜಿ ಮುಖ್ಯಮಂತ್ರಿ ಆಗುವುದಿಲ್ಲ, ಅವರು ಶಾಶ್ವತ ಮುಖ್ಯಮಂತ್ರಿ," ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಂಸಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರು ಅವರೊಂದಿಗಿನ ತಮ್ಮ ಸುದೀರ್ಘ ಒಡನಾಟ ಹಾಗೂ ಅವರ ಕಲಾ ಸೇವೆಯನ್ನು ಸ್ಮರಿಸಿದರು.
ಅಪರೂಪದ ಸಾಧನೆ: ಚಂದ್ರು ಅವರು 93 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಒಂದೊಂದು ನಾಟಕ ಸಿದ್ಧಪಡಿಸಿ ನಟಿಸುವುದು ಸುಲಭವಲ್ಲ. 'ಮುಖ್ಯಮಂತ್ರಿ' ನಾಟಕವೊಂದರಲ್ಲೇ 900ನೇ ಪ್ರದರ್ಶನ ಪೂರೈಸಿರುವುದು ಅಪರೂಪದ ಸಾಧನೆ. ಜೊತೆಗೆ ಸಿನಿಮಾದಲ್ಲೂ 530ಕ್ಕೂ ಹೆಚ್ಚು ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ರಂಗಭೂಮಿಯ ಸವಾಲು: ಸಿನಿಮಾದಲ್ಲಿ ತಪ್ಪಾದರೆ ‘ಕಟ್’ ಹೇಳಿ ಮತ್ತೊಮ್ಮೆ ಚಿತ್ರೀಕರಿಸಲು ಅವಕಾಶವಿರುತ್ತದೆ. ಆದರೆ ರಂಗಭೂಮಿಯಲ್ಲಿ ಪ್ರೇಕ್ಷಕರ ಎದುರು ನೇರವಾಗಿ ಅಭಿನಯಿಸಬೇಕಾದ ದೊಡ್ಡ ಸವಾಲಿರುತ್ತದೆ. ಚಂದ್ರು ಅವರ ಅದ್ಭುತ ಅಭಿನಯದಿಂದ ನಾಟಕ ವೀಕ್ಷಿಸುವ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಾರೆ.
ಸಾಮಾಜಿಕ ಕಳಕಳಿ: ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗಿದ್ದರೂ ತಪ್ಪುಗಳು ಮುಂದುವರಿದಿವೆ. ಅಂತಹ ತಪ್ಪುಗಳನ್ನು ಸಮಾಜದ ಮುಂದೆ ಎತ್ತಿ ತೋರಿಸುವ ಕೆಲಸವನ್ನು ರಂಗಭೂಮಿ ನಿರಂತರವಾಗಿ ಮಾಡುತ್ತಿದೆ.
ರಾಜಕೀಯ ಹಾಗೂ ಸಾಂಸ್ಕೃತಿಕ ಸೇವೆ: "ನಾನು 1983ರಲ್ಲಿ ಶಾಸಕನಾದೆ, ಚಂದ್ರು ಅವರು 1985ರಲ್ಲಿ ಶಾಸಕರಾದರು. ರಾಮಕೃಷ್ಣ ಹೆಗಡೆಯವರು ಅವರನ್ನು ರಾಜಕೀಯಕ್ಕೆ ಕರೆತಂದರು. ಚಂದ್ರು ಅವರು ಶಾಸಕರಾಗಿ, ಎಂಎಲ್‌ಸಿಯಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ನಾಡು-ನುಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ," ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಮುಖ್ಯಮಂತ್ರಿ ಚಂದ್ರು ಅವರು ಇನ್ನಷ್ಟು ವರ್ಷಗಳ ಕಾಲ ಆರೋಗ್ಯದಿಂದ ಬದುಕಿ, ಮತ್ತಷ್ಟು ನಾಟಕಗಳಲ್ಲಿ ಅಭಿನಯಿಸುವಂತಾಗಲಿ. ಭಗವಂತ ಅವರಿಗೆ ಉತ್ತಮ ಆಯುಷ್ಯ ಮತ್ತು ಆರೋಗ್ಯ ನೀಡಲಿ ಎಂದು ಸಿದ್ದರಾಮಯ್ಯ ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಮತ್ತಿರರು ಇದ್ದರು.




