ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕೆಪಿಎಸ್ಸಿ ಅಕ್ರಮಗಳು ಹಾಗೂ ಆಡಳಿತ ಸರ್ಕಾರದ ವೈಫಲ್ಯಗಳ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಟು ಟೀಕೆಗಳನ್ನು ಮಾಡಿದ್ದಾರೆ.
ಕರ್ನಾಟಕ ವಿಧಾನಪರಿಷತ್ತಿಗೆ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಂದ ನಡೆಯಲಿರುವ ಚುನಾವಣೆ ಸಂಬಂಧ ಎನ್‌ಡಿಎ ಮೈತ್ರಿಕೂಟದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಮುಗಿಬಿದ್ದರು.
ಕೆಪಿಎಸ್ಸಿ ಅಕ್ರಮಗಳ ಬಗ್ಗೆ ಮೌನ: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿರುವ ಅವ್ಯಾಹತ ಅಕ್ರಮಗಳ ಬಗ್ಗೆ 'ಕಾಕ್ರೋಚ್ ಜನತಾ ಪಾರ್ಟಿ' (ಕಾಂಗ್ರೆಸ್) ಏಕೆ ಮೌನವಾಗಿದೆ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು. ಹೈಕೋರ್ಟ್ ಆದೇಶದಂತೆ ಎಸ್‌ಐಟಿ ತನಿಖೆ ನಡೆಸಲು ಮುಂದಾದರೆ, ಸರ್ಕಾರ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ರೈತರಿಗೆ ₹2500 ಪರಿಹಾರ - ಆಕ್ರೋಶ: ಬರ ಪರಿಹಾರವಾಗಿ ರೈತರಿಗೆ ₹2500 ಘೋಷಿಸಿರುವುದನ್ನು ತೀವ್ರವಾಗಿ ಟೀಕಿಸಿದ ಅವರು, "ರೈತನೇನು ಭಿಕ್ಷುಕನೇ? ನಿಮ್ಮ ಯೋಗ್ಯತೆಗೆ ರೈತರಿಗೆ ಇಷ್ಟೇನಾ? ಹಿಂದಿನ ಮುಖ್ಯಮಂತ್ರಿ ಕಚೇರಿಯಲ್ಲಿ ಕಾಫಿ-ಟೀ ಕುಡಿಯಲು ₹200 ಕೋಟಿ ಖರ್ಚು ಮಾಡಿದ್ದೀರಲ್ಲ, ರೈತರನ್ನು ಈ ಮಟ್ಟಕ್ಕೆ ಇಳಿಸಿದ್ದೀರಾ?" ಎಂದು ಸಿಎಂ ವಿರುದ್ಧ ಕಿಡಿಕಾರಿದರು.
ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆಗೆ ಖಂಡನೆ: ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಮಾಡುತ್ತಿರುವ ಪ್ರತಿಭಟನೆಯನ್ನು ಪ್ರಶ್ನಿಸಿದ ಅವರು, "ಯಾವ ಪುರುಷಾರ್ಥಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ? ಕಳೆದ 78 ವರ್ಷಗಳಿಂದ ಪ್ರಜಾಪ್ರಭುತ್ವ ಉಳಿದಿರುವುದು ಚುನಾವಣಾ ಆಯೋಗದಿಂದಲೇ ಹೊರತು ಕಾಂಗ್ರೆಸ್‌ನಿಂದಲ್ಲ" ಎಂದರು. ರಾಹುಲ್ ಗಾಂಧಿಯವರು ಜನರ ದಿಕ್ಕು ತಪ್ಪಿಸಲು ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಾರೆ ಎಂದು ದೂರಿದರು.
ಕೆಆರ್‌ಐಡಿಎಲ್ AEE ನಾಪತ್ತೆ: KRIDL ನ AEE ನಾಪತ್ತೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, "ಇಂತಹ ಘಟನೆ ಒಂದಲ್ಲ, ಇನ್ನು ಮುಂದೆ ಇಂತಹ ಘಟನೆಗಳು ಪ್ರತಿದಿನ ಪ್ರಾರಂಭವಾಗುತ್ತವೆ" ಎಂದು ಗಂಭೀರ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಡುಭ್ರಷ್ಟ ಆಡಳಿತ ನಡೆಯುತ್ತಿದ್ದು, ಖಜಾನೆ ಖಾಲಿಯಾಗಿದೆ ಮತ್ತು ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಕೇಂದ್ರ ಸಚಿವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.




