ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಿನ್ನಾಭಿಪ್ರಾಯಗಳನ್ನು ಎದುರಿಸುವ ಸಂದರ್ಭದಲ್ಲಿ ಮತ್ತೊಬ್ಬರ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಬೌದ್ಧಿಕ ಸ್ವಾತಂತ್ರ್ಯ, ನ್ಯಾಯಸಮ್ಮತತೆ ಹಾಗೂ ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಗುಣವನ್ನು ಕಾನೂನು ಪದವೀಧರರು ಬೆಳೆಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸಲಹೆ ನೀಡಿದರು.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್ಎಲ್ಎಸ್ಐಯು)ಯ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ವೃತ್ತಿಗೆ ಕೇವಲ ಕಾನೂನು ವಿಧಿಗಳು ಮತ್ತು ಪೂರ್ವನಿದರ್ಶನಗಳ ಜ್ಞಾನವಷ್ಟೇ ಸಾಲದು. ನ್ಯಾಯಯುತವಾದುದನ್ನು ಸಮರ್ಥಿಸುವ ಧೈರ್ಯ ಹಾಗೂ ಕಡೆಗಣಿಸಲ್ಪಟ್ಟವರ ಧ್ವನಿಗೆ ಕಿವಿಗೊಡುವ ವಿನಯ ಅತ್ಯಗತ್ಯ ಎಂದು ತಿಳಿಸಿದರು.
ಕಾನೂನು ಶಿಕ್ಷಣದ ಉದ್ದೇಶವು ಕೇವಲ ಅಪರಾಧ ಅಥವಾ ಸಂವಿಧಾನಾತ್ಮಕ ಕಾನೂನಿನ ತತ್ವಗಳನ್ನು ಕಲಿಯುವುದಕ್ಕೆ ಸೀಮಿತವಾಗಿಲ್ಲ. ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಜನರನ್ನು ಅರ್ಥಮಾಡಿಕೊಳ್ಳುವುದು, ವಿಚಾರಗಳ ವಿನಿಮಯ ನಡೆಸುವುದು ಹಾಗೂ ತಮ್ಮ ನಿಲುವುಗಳನ್ನು ಮರುಪರಿಶೀಲಿಸುವುದೂ ಶಿಕ್ಷಣದ ಭಾಗವಾಗಿದೆ. ಶಾಲೆಗಳಲ್ಲಿ ವಿಭಿನ್ನ ವಿಚಾರಗಳು ಮುಖಾಮುಖಿಯಾದಾಗ, ಸಂವಾದದ ಮೂಲಕ ಹೊಸ ತಿಳುವಳಿಕೆ ಮೂಡುತ್ತದೆ. ಕಾನೂನು ಸ್ಥಿರವಾದುದಲ್ಲ, ಅದನ್ನು ಅಭ್ಯಾಸ ಮಾಡುವವರ ಚಿಂತನೆ ಮತ್ತು ಕಾರ್ಯಗಳ ಮೂಲಕ ಅದು ಉಸಿರಾಡುತ್ತದೆ ಹಾಗೂ ವಿಕಸನಗೊಳ್ಳುತ್ತದೆ ಎಂದರು.
ವೃತ್ತಿಪರ ಅನುಕೂಲಕ್ಕಾಗಿ ಪ್ರಾಮಾಣಿಕತೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದ ಅವರು, ಸುಲಭದ ಹಾದಿ ಹಿಡಿಯುವ ಆಮಿಷ ಎದುರಾದಾಗಲೂ ನೈತಿಕ ಮೌಲ್ಯಗಳಿಗೆ ಬದ್ಧರಾಗಿರಬೇಕು. ಕಾನೂನು ಪದವೀಧರರು ವ್ಯಕ್ತಿಗಳ ಸ್ವಾಯತ್ತತೆಯ ರಕ್ಷಕರಾಗಿ ಮತ್ತು ಜನಸೇವಕರಾಗಿ ಕಾರ್ಯನಿರ್ವಹಿಸಬೇಕು. ದೇಶವು ನಿಮ್ಮನ್ನು ಕೇವಲ ಕಾನೂನು ವೃತ್ತಿಪರರಾಗಿ ಮಾತ್ರವಲ್ಲ, ಭರವಸೆಯ ಮುಂಚೂಣಿಗರು ಎಂದೂ ನೋಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ಈ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿ ಸಹಪಾಠಿಗಳೊಂದಿಗೆ ಸಂಭ್ರಮಿಸಬೇಕಿದ್ದ ಎನ್ಎಲ್ಎಸ್ಐಯು ಪದವೀಧರೆ ಊರ್ವಶಿ ಕೃಷ್ಣಾತ್ರಾ ಅವರ ನಿಧನವನ್ನು ಸ್ಮರಿಸಿ ಸಿಜೆಐ ಸಂತಾಪ ಸೂಚಿಸಿದರು.
ಸರ್ಕಾರವನ್ನು ಪ್ರಶ್ನಿಸುವುದನ್ನು ನಿಲ್ಲಿಸಬೇಡಿ: ಡಿಕೆಶಿ
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸಲು, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗುವಂತೆ ಮಾಡಲು ವಿದ್ಯಾರ್ಥಿಗಳು ಎಂದಿಗೂ ಪ್ರಶ್ನಿಸುವುದನ್ನು ನಿಲ್ಲಿಸಬಾರದು ಹಾಗೂ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಬಾರದು ಎಂದರು.
ಎಲ್ಲರೂ ಸರ್ಕಾರದೊಂದಿಗೆ ಸಮ್ಮತಿಸುವುದೇ ಸಶಕ್ತ ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುವುದೇ ನಿಜವಾದ ಸಶಕ್ತ ಪ್ರಜಾಪ್ರಭುತ್ವ. ಸಾಂವಿಧಾನಿಕ ತತ್ವಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಆಡಳಿತ ಮತ್ತು ಸಾರ್ವಜನಿಕ ಜೀವನಕ್ಕೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಯುವ ವಕೀಲರಿಗೆ ಸರ್ಕಾರದ ಹೊಸ ಕೊಡುಗೆಗಳು: ಕರ್ನಾಟಕ ಸರ್ಕಾರವು ಕಾನೂನು ಪದವೀಧರರಿಗೆ ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡಲು ಮತ್ತು ಯುವ ವಕೀಲರಿಗೆ ನಿರಂತರ ಶಿಕ್ಷಣವನ್ನು ಒದಗಿಸಲು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಿದೆ ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು. ಜೊತೆಗೆ, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಕೀಲರು ಯುವ ಉದ್ಯಮಿಗಳಿಗೆ ಉಚಿತ ಕಾನೂನು ಸಲಹೆ ನೀಡುವ ನಿಟ್ಟಿನಲ್ಲಿ 'ಸ್ಟಾರ್ಟ್-ಅಪ್ ಲಾ ಕ್ಲಿನಿಕ್' ಸ್ಥಾಪನೆಗೆ ಸರ್ಕಾರ ಬೆಂಬಲಿಸಲಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಅರುಂಧತಿ ನಾಗ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನ್ಯಾಷನಲ್ ಲಾ ಶಾಲೆ ವಿಶ್ವವಿದ್ಯಾಲಯದ ಸಭಾಂಗಣ ಹಾಗೂ ವಿದ್ಯಾರ್ಥಿ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಘಟಿಕೋತ್ಸವದ ಸುತ್ತಲಿನ ವಿವಾದದ ಹಿನ್ನೆಲೆ: ಮೂಲತಃ ಸೆಪ್ಟಂಬರ್ 12ರಂದೇ ಎನ್ಎಲ್ಎಸ್ಐಯು ಘಟಿಕೋತ್ಸವ ನಿಗದಿಯಾಗಿತ್ತು. ಆದರೆ ಸಿಜೆಇ ಸೂರ್ಯಕಾಂತ್ ಅವರ ಭಾಗವಹಿಸುವಿಕೆಯ ಕುರಿತು ಹಾಲಿ, ಪದವಿ ಪಡೆಯಲಿರುವ ಹಾಗೂ ಹಳೆಯ ವಿದ್ಯಾರ್ಥಿಗಳು ಸೇರಿದಂತೆ 700ಕ್ಕೂ ಹೆಚ್ಚು ಮಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರಿಂದಾಗಿ ಅನಿವಾರ್ಯವಾಗಿ ಘಟಿಕೋತ್ಸವವನ್ನು ರದ್ದುಗೊಳಿಸಿ, ಗೈರುಹಾಜರಿಯಲ್ಲಿಯೇ ಪದವಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ನಂತರ ವಿದ್ಯಾರ್ಥಿಗಳ ಮನವೂಲಿಸಿ, ಕೆಲ ಬದಲಾವಣೆ ಹಾಗೂ ವಿರೋಧಗಳ ನಡುವೆಯೂ ಈಗ ಯಶಸ್ವಿಯಾಗಿ ಈ ಘಟಿಕೋತ್ಸವವನ್ನು ಮರು ಹಮ್ಮಿಕೊಳ್ಳಲಾಯಿತು.



