ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ 'ಶುಚಿ ಕಿಟ್' ಪೂರೈಸದಿರುವುದನ್ನು ಖಂಡಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಠ್ಯಪುಸ್ತಕ ವಿತರಣೆಯ ವಿಳಂಬದ ಬೆನ್ನಲ್ಲೇ ಇದೀಗ ವಿದ್ಯಾರ್ಥಿಗಳ ನಿತ್ಯಬಳಕೆಯ ಅಗತ್ಯ ವಸ್ತುಗಳ ಪೂರೈಕೆಯಲ್ಲೂ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ತಲುಪದ ಅಗತ್ಯ ವಸ್ತುಗಳು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ವ್ಯಾಪ್ತಿಯ 874 ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಬೂನು, ಟೂತ್‌ಪೇಸ್ಟ್, ಬ್ರಷ್ ಹಾಗೂ ಕೊಬ್ಬರಿ ಎಣ್ಣೆ ಒಳಗೊಂಡ ನಿತ್ಯ ಬಳಕೆಯ 'ಶುಚಿ ಕಿಟ್' ಹಾಗೂ ಹೆಣ್ಣುಮಕ್ಕಳಿಗೆ ನೀಡಬೇಕಾದ ನೈರ್ಮಲ್ಯ ಸಾಮಗ್ರಿಗಳು ನಾಲ್ಕು ತಿಂಗಳುಗಳಿಂದ ತಲುಪಿಲ್ಲ.
ಪೋಷಕರಿಗೆ ಹೆಚ್ಚಿದ ಹೊರೆ: ಟೆಂಡರ್ ವಿಳಂಬದ ನೆಪ ಹೇಳಿ ಮೂಲಭೂತ ಸೌಲಭ್ಯ ತಡೆಹಿಡಿದಿರುವುದರಿಂದ, ಬಡ ಮತ್ತು ಮಧ್ಯಮ ವರ್ಗದ ಪೋಷಕರೇ ತಮ್ಮ ಜೇಬಿನಿಂದ ಹಣ ಹಾಕಿ ನೈರ್ಮಲ್ಯ ಸಾಮಗ್ರಿಗಳನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮನ್ವಯದ ಕೊರತೆ: ರಾಜ್ಯ ಬೊಕ್ಕಸದ ಹಣಕಾಸು ನಿರ್ವಹಣೆ, ಟೆಂಡರ್ ಪ್ರಕ್ರಿಯೆ ಹಾಗೂ ಇಲಾಖೆಗಳ ನಡುವಿನ ಸಮನ್ವಯ ಕೊರತೆಯ ಪರಿಣಾಮವನ್ನು ವಿದ್ಯಾರ್ಥಿಗಳ ಮೇಲೆ ಹೊರಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಬಾಕಿ ಇರುವ ಶುಚಿ ಕಿಟ್‌ಗಳನ್ನು ತಕ್ಷಣವೇ ವಿತರಿಸಿ, ಇಂತಹ ವಿಳಂಬ ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.




