ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನುಕಂಪದ ಆಧಾರದ ಮೇಲೆ ನೀಡುವ ನೇಮಕಾತಿಗಳು ಒಂದು ಬಾರಿಯ ಪರಿಹಾರವಾಗಿದೆಯೇ ವಿನಃ, ಅದು ನಿರಂತರ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನಾಗಿ ಪರಿಗಣಿಸುವುದಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕವಾಗಿದ್ದ ನೌಕರರನ್ನು, ಉನ್ನತ ಶೈಕ್ಷಣಿಕ ಅರ್ಹತೆ ಇದೆ ಎಂಬ ಕಾರಣಕ್ಕೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರಿಗಣಿಸುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣದ ಹಿನ್ನೆಲೆ:
ಕುಟುಂಬದ ಏಕೈಕ ಜೀವನಾಧಾರವಾಗಿದ್ದ ತಂದೆಯ ನಿಧನದ ಹಿನ್ನೆಲೆಯಲ್ಲಿ, ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಿ ಪ್ರತಿವಾದಿಯು ಅರ್ಜಿ ಸಲ್ಲಿಸಿದ್ದರು.
ಅದರಂತೆ ಮಾರ್ಚ್ 26, 2018ರಂದು ಅವರನ್ನು ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕ ಮಾಡಿಕೊಳ್ಳಲಾಯಿತು. ಈ ಹುದ್ದೆಯನ್ನು ಸ್ವೀಕರಿಸಿ ಸುಮಾರು ಆರು ವರ್ಷಗಳ ಬಳಿಕ (2024ರಲ್ಲಿ), ತಮ್ಮ ಉನ್ನತ ಶೈಕ್ಷಣಿಕ ಅರ್ಹತೆ ಪರಿಗಣಿಸಿ ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆ ಬಡ್ತಿ ಅಥವಾ ಬದಲಾವಣೆ ಮಾಡುವಂತೆ ಕೋರಿ ಅವರು ಕೆಎಟಿ ಮೆಟ್ಟಿಲೇರಿದ್ದರು.
ಪ್ರತಿವಾದಿಗಳ ಅರ್ಜಿಯನ್ನು ಪುರಸ್ಕರಿಸಿದ್ದ ಕೆಎಟಿ, ಶೈಕ್ಷಣಿಕ ಅರ್ಹತೆ ಪರಿಗಣಿಸಿ ಎಫ್‌ಡಿಎ ಹುದ್ದೆಗೆ ನೇಮಕ ಮಾಡುವಂತೆ ಸರ್ಕಾರದ ಆದೇಶವನ್ನು ರದ್ದುಪಡಿಸಿ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಹೈಕೋರ್ಟ್ ಪೀಠದ ಪ್ರಮುಖ ತೀರ್ಪಿನ ವಿವರಗಳು:
ಒಮ್ಮೆ ಮಾತ್ರದ ಪರಿಹಾರ ಕ್ರಮ: ಅನುಕಂಪದ ನೇಮಕಾತಿ ಎಂಬುದು ಕುಟುಂಬದ ತಕ್ಷಣದ ಆರ್ಥಿಕ ಸಂಕಷ್ಟ ನಿವಾರಣೆಗೆ ನೀಡುವ ತಾತ್ಕಾಲಿಕ ಹಾಗೂ ಒಮ್ಮೆ ಮಾತ್ರದ ಪರಿಹಾರವೇ ಹೊರತು, ಉನ್ನತ ಹುದ್ದೆ ಅಥವಾ ಹೆಚ್ಚುವರಿ ಸೇವಾ ಪ್ರಯೋಜನಗಳನ್ನು ನಿರಂತರವಾಗಿ ಪಡೆಯಲು ಅದನ್ನು ಬಳಸಲಾಗದು.
ಕಾನೂನಾತ್ಮಕ ಹಕ್ಕಿಲ್ಲ: ಉನ್ನತ ಶೈಕ್ಷಣಿಕ ಅರ್ಹತೆಯು ಆ ಹುದ್ದೆಗೆ ಅರ್ಹತೆ ನೀಡಬಹುದೇ ವಿನಃ, ಅನುಕಂಪದ ಯೋಜನೆಯಡಿ ಆ ನಿರ್ದಿಷ್ಟ ಉನ್ನತ ಹುದ್ದೆಯನ್ನೇ ಪಡೆಯಬೇಕು ಎಂಬ ಯಾವುದೇ ಕಾನೂನಾತ್ಮಕ ಹಕ್ಕನ್ನು ಅದು ಸೃಷ್ಟಿಸುವುದಿಲ್ಲ.
ಕಾಲಮಿತಿಯ ಉಲ್ಲಂಘನೆ: 2018ರಲ್ಲಿ ಎಸ್‌ಡಿಎ ಹುದ್ದೆ ಸ್ವೀಕರಿಸಿ ಸುಮಾರು ಆರು ವರ್ಷಗಳ ಬಳಿಕ ನ್ಯಾಯಮಂಡಳಿ ಮೆಟ್ಟಿಲೇರಿರುವುದು ಆಡಳಿತಾತ್ಮಕ ನ್ಯಾಯಮಂಡಳಿಗಳ ಕಾಯ್ದೆಯ ಸೆಕ್ಷನ್ 21ರ ನಿಗದಿತ ಕಾಲಮಿತಿಯ ಉಲ್ಲಂಘನೆಯಾಗಿದೆ. ಸಮರ್ಪಕ ಕಾರಣವಿಲ್ಲದೆ ಇಂತಹ ಅರ್ಜಿಗಳಿಗೆ ಪರಿಹಾರ ನೀಡಲಾಗದು.
ತಪ್ಪಾದ ಕ್ರಮಕ್ಕೆ ಹಕ್ಕಿಲ್ಲ: ಈ ಹಿಂದೆ ಕೆಲವರಿಗೆ ತಪ್ಪಾಗಿ ಅಥವಾ ವಿನಾಯಿತಿ ರೂಪದಲ್ಲಿ ಪ್ರಯೋಜನ ನೀಡಿದ್ದರೂ, ಅದನ್ನು ಆಧಾರವಾಗಿಸಿಕೊಂಡು ಮತ್ತೊಂದು ಕಾನೂನುಬಾಹಿರ ಕ್ರಮಕ್ಕೆ ಬೇರೆಯವರು ಹಕ್ಕು ಸಾಧಿಸಲು ಬರುವುದಿಲ್ಲ.
ಸಮಾನತೆಯ ಹಕ್ಕಿಗೆ ಧಕ್ಕೆ: ನಿಯಮಗಳಿಂದ ವಿಚಲಿತವಾಗಿ ಕೆಲವರಿಗೆ ಇಂತಹ ಸೌಲಭ್ಯಗಳನ್ನು ನೀಡುವುದು ಮುಂದಿನ ದಿನಗಳಲ್ಲಿ ಅಸಮಾನತೆ ಹಾಗೂ ಅನಗತ್ಯ ನ್ಯಾಯಾಂಗ ವ್ಯಾಜ್ಯಗಳಿಗೆ ದಾರಿ ಮಾಡಿಕೊಡಲಿದ್ದು, ಇದು ಸಂವಿಧಾನದ ವಿಧಿ 14ರ (ಸಮಾನತೆಯ ಹಕ್ಕು) ಉಲ್ಲಂಘನೆಯಾಗಲಿದೆ ಎಂದು ನ್ಯಾಯಾಲಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಕೆಎಟಿ ನೀಡಿದ್ದ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ.




