ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಝೆಕ್ ಗಣರಾಜ್ಯದ ಉಪ ಪ್ರಧಾನಮಂತ್ರಿ ಹಾಗೂ ವಾಣಿಜ್ಯ ಸಚಿವರಾದ ಕಾರೆಲ್ ಹಾವ್ಲಿಕ್ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಹೂಡಿಕೆ ಮಾಡುವಂತೆ ಝೆಕ್ ಕಂಪನಿಗಳಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.
ಪ್ರಮುಖ ಚರ್ಚೆಗಳು ಹಾಗೂ ಸಹಕಾರದ ಕ್ಷೇತ್ರಗಳು-
ಭೇಟಿಯ ವೇಳೆ ಉಭಯ ನಾಯಕರು ಕೈಗಾರಿಕೆ, ತಂತ್ರಜ್ಞಾನ ಹಾಗೂ ಆರ್ಥಿಕ ವಲಯಗಳಲ್ಲಿ ಪರಸ್ಪರ ಸಹಕಾರ ವಿಸ್ತರಿಸುವ ಕುರಿತು ಸಮಾಲೋಚನೆ ನಡೆಸಿದರು.
ಇಂಧನ ಕ್ಷೇತ್ರ: ದೇಶದಲ್ಲೇ ಅತಿ ದೊಡ್ಡ ಸೌರ ಹಾಗೂ ಜಲವಿದ್ಯುತ್ ಯೋಜನೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ಶಕ್ತಿ ಮತ್ತು ಇಂಧನ ಕ್ಷೇತ್ರಕ್ಕೆ ಅಪಾರ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಜಪಾನ್/ಝೆಕ್ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗಿದೆ.
ಆಟೋಮೊಬೈಲ್ ಮತ್ತು ಭವಿಷ್ಯದ ಸಂಚಾರ: ಎಲೆಕ್ಟ್ರಿಕ್ ವಾಹನಗಳು, ವಾಹನ ಪರೀಕ್ಷೆ ಹಾಗೂ ಆಟೋ ಬಿಡಿಭಾಗಗಳ ತಯಾರಿಕೆಯಲ್ಲಿ ಸಹಕಾರ.
ಬಾಹ್ಯಾಕಾಶ ಮತ್ತು ರಕ್ಷಣೆ: ವೈಮಾಂತರಿಕ್ಷ ಮತ್ತು ರಕ್ಷಣಾ ಉತ್ಪಾದನಾ ವಲಯದಲ್ಲಿ ನೂತನ ಪಾಲುದಾರಿಕೆಗಳನ್ನು ರೂಪಿಸುವುದು.
ಕೃಷಿ ಹಾಗೂ ಅರಣ್ಯ: ತೋಟಗಾರಿಕೆ, ಪುಷ್ಪಕೃಷಿ ಹಾಗೂ ಆಧುನಿಕ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ.
ಶೈಕ್ಷಣಿಕ ಮತ್ತು ಸಂಶೋಧನೆ: ಝೆಕ್ ವಿಶ್ವವಿದ್ಯಾಲಯಗಳು ಹಾಗೂ ಕರ್ನಾಟಕದ ಶಿಕ್ಷಣ ಸಂಸ್ಥೆಗಳ ನಡುವೆ 'ಕೌಶಲ್ಯ ಅಭಿವೃದ್ಧಿ' ಮತ್ತು 'ಅನ್ವಯಿಕ ಸಂಶೋಧನೆ'ಗೆ ಹೆಚ್ಚಿನ ಪ್ರಾಮುಖ್ಯತೆ.
ಜಾಗತಿಕ ಪಾಲುದಾರಿಕೆಗೆ ಮುಕ್ತ ಆಹ್ವಾನ
ಸ್ಕೋಡಾ ಮತ್ತು ಬಾಟಾ ನಂತಹ ಜಾಗತಿಕ ಸಂಸ್ಥೆಗಳ ಮಾದರಿಯಲ್ಲೇ ಕರ್ನಾಟಕದ ಸ್ಥಳೀಯ ಕಂಪನಿಗಳೊಂದಿಗೆ 'ಟಾಟಾ ಆಟೋಕಾಂಪ್ - ಸ್ಕೋಡಾ ಗ್ರೂಪ್' ಮಾದರಿಯ ಹೊಸ ಜಂಟಿ ಪಾಲುದಾರಿಕೆಗಳನ್ನು ರೂಪಿಸಲು ರಾಜ್ಯ ಸರ್ಕಾರವು ಮುಕ್ತವಾಗಿದೆ ಎಂದು ಸಚಿವರು ತಿಳಿಸಿದರು.
ಈ ರೀತಿಯ ಪಾಲುದಾರಿಕೆಗಳಿಂದ ತಂತ್ರಜ್ಞಾನ ವರ್ಗಾವಣೆ, ಅತ್ಯಾಧುನಿಕ ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಸ್ಥಳೀಯ ಉದ್ಯಮಗಳ ಬಲವರ್ಧನೆ ಮತ್ತು ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಹೊಸ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಾದೇಶಿಕ ಸಮತೋಲಿತ ಅಭಿವೃದ್ಧಿಗೆ ಬದ್ಧತೆ
"ಜಾಗತಿಕ ಹೂಡಿಕೆ - ಸ್ಥಳೀಯ ಅಭಿವೃದ್ಧಿ - ಯುವಜನರಿಗೆ ಉದ್ಯೋಗ. ಕರ್ನಾಟಕದ ಕೈಗಾರಿಕಾ ಪ್ರಗತಿಯ ಫಲ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ತಲುಪಬೇಕು. ಕೇವಲ ಬೆಂಗಳೂರು ಮಾತ್ರವಲ್ಲದೆ, ವಿವಿಧ ಜಿಲ್ಲೆಗಳಲ್ಲೂ ಹೂಡಿಕೆ, ಉದ್ಯೋಗ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು ನಮ್ಮ ಬದ್ಧತೆಯಾಗಿದೆ."
ಎಂ.ಬಿ. ಪಾಟೀಲ್, ಕೈಗಾರಿಕಾ ಸಚಿವರು.
ಈ ಉನ್ನತ ಮಟ್ಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಝೆಕ್ ಗಣರಾಜ್ಯದ ನಿಯೋಗದ ಕಡೆಯಿಂದ ವಿದೇಶಾಂಗ ಸಚಿವೆ ಮರಿಯಾ ಚಟರ್ಡೋವ, ಮಾರೆಟ್ ಲಿಬ್ರರ್ಕಿ, ಕ್ಯಾತರಿನ ಗಜುರ್ನೋವಾ, ರಿಚರ್ಡ್ ಲಾವರ್ಟಿ, ಮಿರೋಸ್ಲಾವ್ ಒಕ್ರೂಲಿ, ಕ್ಯಾತರಿನ ಪೀಟರ್ಸನ್, ಕ್ಯಾತರಿನ ವವ್ಕೊವಾ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಈ ಮಹತ್ವದ ಭೇಟಿಯಲ್ಲಿಪಾಲ್ಗೊಂಡಿದ್ದರು.




