ಚಂದ್ರವಳ್ಳಿ ನ್ಯೂಸ್, ಟೋಕಿಯೋ/ಬೆಂಗಳೂರು:
ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶ್ವವಿಖ್ಯಾತ 'ಶಿಂಕಾನ್ಸೆನ್' ಬುಲೆಟ್ ರೈಲಿನಲ್ಲಿ ನಗೋಯಾದಿಂದ ಒಸಾಕಾಗೆ ಪ್ರಯಾಣ ಬೆಳೆಸಿದರು. ಈ ವೇಳೆ ರೈಲು ನಿಲ್ದಾಣದಲ್ಲಿ ನೆರೆದಿದ್ದ ಅನಿವಾಸಿ ಕನ್ನಡಿಗರು ಹಾಗೂ ಅವರ ಕುಟುಂಬಸ್ಥರೊಂದಿಗೆ ಮುಖ್ಯಮಂತ್ರಿಗಳು ಅತ್ಯಂತ ಆತ್ಮೀಯವಾಗಿ ಸಂವಾದ ನಡೆಸಿದರು.
ಜಪಾನ್ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಬೆರೆತ ಮುಖ್ಯಮಂತ್ರಿಗಳು, ಅವರ ಯೋಗಕ್ಷೇಮ ಹಾಗೂ ಕುಶಲೋಪರಿ ವಿಚಾರಿಸಿದರು. ಅಲ್ಲದೆ, ವಿದೇಶಿ ನೆಲದಲ್ಲಿನ ಅವರ ಜೀವನಾನುಭವಗಳು ಮತ್ತು ವೃತ್ತಿಪರ ಸಾಧನೆಗಳ ಕುರಿತು ಮಾಹಿತಿ ಪಡೆದುಕೊಂಡರು. ನೆಚ್ಚಿನ ನಾಯಕನನ್ನು ಕಂಡು ಸಂಭ್ರಮಿಸಿದ ಕನ್ನಡಿಗರು, ಮುಖ್ಯಮಂತ್ರಿಗಳೊಂದಿಗೆ ಫೋಟೋ ತೆಗೆಸಿಕೊಂಡು ಸಂತಸ ಹಂಚಿಕೊಂಡರು.
ರಾಜ್ಯದ ಸಾರಿಗೆ ವ್ಯವಸ್ಥೆ ಬಲವರ್ಧನೆಗೆ ಪ್ರೇರಣೆ: ಇದೇ ಪ್ರಯಾಣದ ಸಂದರ್ಭದಲ್ಲಿ ಜಪಾನ್ನ ಅತ್ಯಂತ ವ್ಯವಸ್ಥಿತ ಶಿಂಕಾನ್ಸೆನ್ ರೈಲು ಜಾಲ, ತಡೆರಹಿತ ಸಂಪರ್ಕ ಹಾಗೂ ದಕ್ಷ ಸಾರಿಗೆ ಮೂಲಸೌಕರ್ಯಗಳನ್ನು ಮುಖ್ಯಮಂತ್ರಿಗಳು ಹತ್ತಿರದಿಂದ ಗಮನಿಸಿದರು.
ಕರ್ನಾಟಕದ ನಗರ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಆಧುನಿಕಗೊಳಿಸಿ, ಬಲಪಡಿಸುವ ನಿಟ್ಟಿನಲ್ಲಿ ಜಪಾನ್ನ ಈ ತಂತ್ರಜ್ಞಾನ ಮತ್ತು ವ್ಯವಸ್ಥೆಗಳು ಬಹಳ ಉಪಯುಕ್ತ ಅನುಭವಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




