ಚಂದ್ರವಳ್ಳಿ ನ್ಯೂಸ್, ತುಮಕೂರು:
ತಾಲೂಕಿನ ತಿಮ್ಮಸಂದ್ರ ಗ್ರಾಮದ ಬಳಿ ಮರವೇರಿ ಕುಳಿತಿದ್ದ ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗ್ರಾಮದ 15 ಜನರ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ: ಕಳೆದ ಗುರುವಾರ ತಿಮ್ಮಸಂದ್ರ ಗ್ರಾಮದ ಅಶ್ವತ್ ಎಂಬುವರ ತೋಟದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆಗೆ ಚಿರತೆಯು ತೆಂಗಿನ ಮರ ಹತ್ತಿ ಕುಳಿತಿತ್ತು.
ಇತ್ತೀಚೆಗೆ ನಡೆದ ತುಮಕೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಿದ್ದ ಆನೆಗಳ ಯೋಗಕ್ಷೇಮ ನೋಡಿಕೊಳ್ಳಲು ಆಗಮಿಸಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಉಪ ನಿರ್ದೇಶಕ ಡಾ. ಎಚ್.ಎಸ್. ಪ್ರಯಾಗ್ ಅವರು, ವರಿಷ್ಠಾಧಿಕಾರಿಗಳ ಸೂಚನೆಯಂತೆ ಘಟನಾ ಸ್ಥಳಕ್ಕೆ ಧಾವಿಸಿ ಸೆರೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ: ಸ್ಥಳದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಚಿರತೆ ದಾಳಿ ಮಾಡುವ ಸಾಧ್ಯತೆಯಿದೆ, ದೂರ ತೆರಳುವಂತೆ ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದರು. ಆದರೆ, 10 ರಿಂದ 15 ಜನರಿದ್ದ ಗುಂಪೊಂದು ಅಧಿಕಾರಿಗಳ ಮಾತಿಗೆ ಕಿವಿಗೊಡದೆ ಕಾರ್ಯಾಚರಣೆಗೆ ಅಡ್ಡಗಾಲು ಹಾಕಿ ಶಬ್ದ ಮಾಡತೊಡಗಿತು. ಜನರ ಗಲಾಟೆ ಮತ್ತು ಶಬ್ದಕ್ಕೆ ಹೆದರಿದ ಚಿರತೆಯು ಮರದಿಂದ ಕೆಳಗೆ ಜಿಗಿದು ಅಧಿಕಾರಿಗಳ ಕೈಗೆ ಸಿಗದೆ ಪರಾರಿಯಾಯಿತು.
ಅಧಿಕಾರಿಗಳ ಮೇಲೆ ಹಲ್ಲೆ, ನಿಂದನೆ: ಚಿರತೆ ತಪ್ಪಿಸಿಕೊಂಡು ಓಡಿಹೋದ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕೂಗಾಡಿ, ನೂಕಾಟ-ತಳ್ಳಾಟ ನಡೆಸಿದರು. "ಈಗಲೇ ಚಿರತೆಯನ್ನು ಹಿಡಿಯಬೇಕು, ಇಲ್ಲದಿದ್ದರೆ ನಿಮ್ಮ ಬಟ್ಟೆ ಬಿಚ್ಚಿಸುತ್ತೇವೆ" ಎಂದು ಬೆದರಿಕೆ ಹಾಕಿ, ಬೆನ್ನಿಗೆ ಕೈಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕೆಟ್ಟ ಶಬ್ದಗಳಿಂದ ನಿಂದಿಸಿ, ಸರ್ಕಾರಿ ವಾಹನ ಮುಂದೆ ಸಗದಂತೆ ತಡೆದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಡಾ. ಪ್ರಯಾಗ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಹೆಬ್ಬೂರು ಠಾಣೆ ಪೊಲೀಸರು ಗ್ರಾಮದ 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.



