ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶಾದ್ಯಂತ 'ಮತ ಕಳ್ಳತನ' ಆರೋಪದ ವಿರುದ್ಧ ಕಾಂಗ್ರೆಸ್ಸುದೀರ್ಘ ಹೋರಾಟ ಮುಂದುವರಿಸಲಿದ್ದು, ನವೆಂಬರ್ 1ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಚುನಾವಣಾ ಆಯೋಗದ 'ಎಸ್ಐಆರ್' ಪ್ರಕ್ರಿಯೆ ಮೂಲಕ ಅಲ್ಪಸಂಖ್ಯಾತರು, ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದ ವರ್ಗಗಳ ಮತಗಳನ್ನು ಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಶುಕ್ರವಾರ ದೆಹಲಿಯಲ್ಲಿ 'ಅಣಕು ಸಂಸತ್ತು' ನಡೆಸಿ ಜಾಗೃತಿ ಮೂಡಿಸಲು ಪಕ್ಷ ನಿರ್ಧರಿಸಿದೆ.
ತಮ್ಮ ಚುನಾವಣಾ ಸಾಧನೆಯ ಬಗ್ಗೆ ಬಿಜೆಪಿಗೆ ನಿಜಕ್ಕೂ ಆತ್ಮವಿಶ್ವಾಸವಿದ್ದರೆ, ತಕ್ಷಣವೇ ಸಂಸತ್ತನ್ನು ವಿಸರ್ಜಿಸಿ ಮತಪತ್ರಗಳ ಮೂಲಕವೇ ಸಾರ್ವತ್ರಿಕ ಚುನಾವಣೆ ಎದುರಿಸಲಿ ಎಂದು ಖರ್ಗೆ ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್ತಿನ 4 ಕ್ಷೇತ್ರಗಳಲ್ಲಿ ಮತಪತ್ರದ ಮೂಲಕವೇ ಚುನಾವಣೆ ನಡೆದು ಬಿಜೆಪಿ-ಜೆಡಿ(ಎಸ್) ಗೆಲುವು ಸಾಧಿಸಿದ್ದರೂ, ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬ್ಯಾಲಟ್ ಪೇಪರ್ ಬಳಸಬೇಕೆಂಬ ತಮ್ಮ ಪಕ್ಷದ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



