ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವಜನರ ಭವಿಷ್ಯವನ್ನು ಕಾಪಾಡುವ ಮತ್ತು ಮಾದಕ ವಸ್ತುಗಳ ಅಕ್ರಮ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಕಳೆದ 10 ದಿನಗಳಲ್ಲಿ ರಾಜ್ಯದಾದ್ಯಂತ ನಡೆಸಲಾದ ಸರಣಿ ಕಾರ್ಯಾಚರಣೆಗಳಲ್ಲಿ ಬರೋಬ್ಬರಿ ₹15.94 ಕೋಟಿ ಮಾರುಕಟ್ಟೆ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ 10 ಆರೋಪಿಗಳನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಪದಾರ್ಥಗಳು: ಕಾರ್ಯಾಚರಣೆಯಲ್ಲಿ 7 ಕೆಜಿ ಎಂಡಿಎಂಎ ಹಾಗೂ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಬಂಧನ: ಮಾದಕ ವಸ್ತುಗಳ ಅಕ್ರಮ ಸಾಗಣೆ ಮತ್ತು ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ 10 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
ಶೂನ್ಯ ಸಹಿಷ್ಣುತೆ ನೀತಿ: ಮಾದಕ ವಸ್ತುಗಳ ಸಾಗಣೆ, ಮಾರಾಟ ಮತ್ತು ಬಳಕೆಯ ವಿರುದ್ಧ ಸರ್ಕಾರವು 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅನುಸರಿಸುತ್ತಿದ್ದು, ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಮಾದಕ ವಸ್ತುಗಳ ಜಾಲವನ್ನು ತಡೆದು ಯುವ ಸಮುದಾಯವನ್ನು ರಕ್ಷಿಸುವುದು ಹಾಗೂ ಸಮಾಜವನ್ನು ಮಾದಕರಹಿತವಾಗಿ ನಿರ್ಮಿಸುವುದು ಸರ್ಕಾರದ ಮುಖ್ಯ ಸಂಕಲ್ಪವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.



