ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ದೊಡ್ಡ ವಂಚನೆಯಾಗಿದ್ದು, ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರು, ದಲಿತರು ಮತ್ತು ಪರಿಶಿಷ್ಟ ಪಂಗಡದ ಮತದಾರರ ಹೆಸರುಗಳನ್ನು ಅಳಿಸಲು ಕೆಲವರು ಹಲವು ಅರ್ಜಿಗಳನ್ನು ಸಲ್ಲಿಸುವ ಮೂಲಕ ದೊಡ್ಡ ‘ಸಂಚು’ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಅಕ್ರಮದಲ್ಲಿ ಬಿಜೆಪಿ ಭಾಗಿಯಾಗಿದೆ ಎಂದು ದೂರಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಗಮನಕ್ಕೆ ಬಾರದೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದ ಅವರು, ತನಿಖೆಗೆ ಆದೇಶಿಸುವವರೆಗೆ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರ ಕಚೇರಿಯಲ್ಲೇ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಫಾರ್ಮ್-7 ದುರುಪಯೋಗ: ಅಲ್ಪಸಂಖ್ಯಾತರು, ಬಡವರು ಮತ್ತು ದಲಿತರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸೆಪ್ಟೆಂಬರ್ 22, 23 ಮತ್ತು 24ರಂದು ಫಾರ್ಮ್-7 ಅರ್ಜಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಲ್ಲಿಸಲಾಗಿದೆ. ವಿಜಯಪುರದಲ್ಲೇ 14,000 ಸೇರಿದಂತೆ ರಾಜ್ಯಾದ್ಯಂತ ಸುಮಾರು 45 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಕಾರ್ಯಕರ್ತರ ಕೈವಾಡ: ಇತರ ಮತದಾರರ ಪರವಾಗಿ ಫಾರ್ಮ್-7 ಸಲ್ಲಿಸುತ್ತಿರುವವರು ಮತಗಟ್ಟೆ ಮಟ್ಟದ ಏಜೆಂಟ್‌ಗಳಲ್ಲ, ಬದಲಿಗೆ ಬಿಜೆಪಿ ಕಾರ್ಯಕರ್ತರು ಎಂದು ಡಿಕೆಶಿ ಕಿಡಿಕಾರಿದರು. ಬೆಳಗಾವಿ, ಭಾಲ್ಕಿ, ಮೈಸೂರು ಸೇರಿದಂತೆ ಹಲವೆಡೆ ಈ ಕುರಿತು ಎಫ್‌ಐಆರ್ ದಾಖಲಾಗಿವೆ.
ಚುನಾವಣಾಧಿಕಾರಿ ಕಚೇರಿಯಲ್ಲಿ ಧರಣಿ ಎಚ್ಚರಿಕೆ: "ತನಿಖೆಗೆ ಆದೇಶಿಸುವವರೆಗೆ ನಾನು ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲೇ ಕುಳಿತುಕೊಳ್ಳುತ್ತೇನೆ. ಸಚಿವ ಸಂಪುಟ ಸಭೆ ಇದ್ದರೂ ಅಲ್ಲಿಂದ ಮರಳಿ ಬರುವುದಿಲ್ಲ, ಬೇಕಾದರೆ ಅಲ್ಲೇ ಮಲಗಬೇಕಾಗಬಹುದು" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕಾಶ್ ರಾಜ್ ನೇತೃತ್ವದ ನಿಯೋಗದಿಂದ ಸಮೀಕ್ಷಾ ವರದಿ ಸಲ್ಲಿಕೆ
ಇದೇ ವೇಳೆ, ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ನೇತೃತ್ವದ ‘ಎಸ್‌ಐಆರ್ ವಿರೋಧಿ ಅಲಯನ್ಸ್’ ಮತ್ತು ‘ಸಿಟಿಜನ್ಸ್‌ವೋಟ್ ಪ್ರೊಟೆಕ್ಷನ್ ಕಮಿಟಿ’ಯ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 23 ಪುಟಗಳ ಸಮೀಕ್ಷಾ ವರದಿಯನ್ನು ಸಲ್ಲಿಸಿತು. 25 ಜಿಲ್ಲೆಗಳ 100 ಮತಗಟ್ಟೆಗಳಲ್ಲಿ ಮನೆ-ಮನೆಗೆ ತೆರಳಿ ನಡೆಸಿದ ಪರಿಶೀಲನೆಯನ್ನು ಈ ವರದಿ ಆಧರಿಸಿದೆ.
ಮತದಾರರು ತಮ್ಮ ನೋಂದಾಯಿತ ವಿಳಾಸದಲ್ಲೇ ವಾಸಿಸುತ್ತಿದ್ದರೂ ಅವರನ್ನು ‘ಗೈರು’, ‘ಸ್ಥಳಾಂತರಗೊಂಡವರು’ ಅಥವಾ ‘ಮೃತರು’ ಎಂದು ತಪ್ಪಾಗಿ ವರ್ಗೀಕರಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಪ್ರಕ್ರಿಯೆಯು ಬಡವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಎಸ್‌ಐಆರ್ ಪ್ರಕ್ರಿಯೆಯನ್ನು ಕೇವಲ ವಿಸ್ತರಿಸುವುದಲ್ಲ, ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು.




