ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ವಿಶ್ವವಿದ್ಯಾಲಯ ಪ್ರಕಟಿಸಿರುವ ವಿಶ್ವದ ಶ್ರೇಷ್ಠ ಶೇಕಡಾ ೨ರಷ್ಟು ವಿಜ್ಞಾನಿಗಳ ಜಾಗತಿಕ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಐವರು ಪ್ರಾಧ್ಯಾಪಕರು ಸ್ಥಾನ ಪಡೆಯುವ ಮೂಲಕ ವಿಶ್ವವಿದ್ಯಾಲಯಕ್ಕೆ ಮಹತ್ವದ ಕೀರ್ತಿ ತಂದಿದ್ದಾರೆ.
ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ.ಸಿ. ಪ್ರಸನ್ನಕುಮಾರ, ಪ್ರೊ. ಯು.ಎಸ್. ಮಹಾಬಲೇಶ್ವರ, ಪ್ರೊ. ಡಿ.ಜಿ. ಪ್ರಕಾಶ್ ಹಾಗೂ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಗೋವಿಂದಪ್ಪ ಅವರು ಸತತ ಐದನೇ ಬಾರಿಗೆ ಈ ಪ್ರತಿಷ್ಠಿತ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇದರೊಂದಿಗೆ, ಗಣಿತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ.ಆರ್. ರಘುನಾಥ್ ಅವರು ಈ ಬಾರಿ ಹೊಸದಾಗಿ ಈ ಜಾಗತಿಕ ಪಟ್ಟಿಗೆ ಆಯ್ಕೆಯಾಗಿದ್ದಾರೆ.
ವಿಜ್ಞಾನಿಗಳ ಉನ್ನತ ಮಟ್ಟದ ಸಂಶೋಧನೆ, ಅವರ ಸಂಶೋಧನಾ ಪ್ರಕಟಣೆಗಳು, ಅವುಗಳ ಮಹತ್ವ, ಮೌಲ್ಯ ಹಾಗೂ ಶೈಕ್ಷಣಿಕ ಪ್ರಭಾವವನ್ನು ಪ್ರಮುಖ ಮಾನದಂಡವಾಗಿಟ್ಟುಕೊಂಡು ಈ ಜಾಗತಿಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.




ಜಾಗತಿಕ ಮಟ್ಟದ ವಿಜ್ಞಾನಿಗಳ ಸಾಲಿನಲ್ಲಿ ವಿಶ್ವವಿದ್ಯಾನಿಲಯದ ಐವರು ವಿಷಯ ತಜ್ಞರು ಸ್ಥಾನ ಪಡೆದಿರುವುದು ಇಡೀ ವಿಶ್ವವಿದ್ಯಾಲಯಕ್ಕೇ ಹೆಮ್ಮೆಯ ಸಂಗತಿಯಾಗಿದೆ. ಈ ಮಹತ್ವದ ಸಾಧನೆಗೈದ ಐವರೂ ಪ್ರಾಧ್ಯಾಪಕರಿಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ.ಇ. ರಂಗಸ್ವಾಮಿ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.




