ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇಲ್ಲಿನ ಗಂಗಾ ಸಮೂಹ ವಿದ್ಯಾ ಸಂಸ್ಥೆಗಳು ಹಾಗೂ ಧಾರವಾಡದ ಕನೆಕ್ಟ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಉದ್ಯೋಗಾಕಾಂಕ್ಷಿಗಳಿಗಾಗಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಈ ಉದ್ಯೋಗ ಮೇಳದಲ್ಲಿ ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿದ್ದ ಒಟ್ಟು 177 ಯುವಕ-ಯುವತಿಯರು ಭಾಗವಹಿಸಿದ್ದರು. ಆಗಮಿಸಿದ್ದ ಪ್ರತಿಷ್ಠಿತ 8 ಕಂಪನಿಗಳ ಪ್ರತಿನಿಧಿಗಳು ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿ, ಅರ್ಹತೆ ಆಧಾರದ ಮೇಲೆ 56 ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಇವರಲ್ಲಿ 9 ಜನರಿಗೆ ಸ್ಥಳದಲ್ಲೇ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಗ್ರಾಮೀಣ ಪ್ರತಿಭೆಗಳಿಗೆ ದಾರಿದೀಪ: ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ತಮ್ಮ ಹರ್ಷ ವ್ಯಕ್ತಪಡಿಸಿದ್ದು, "ಈ ಕಾರ್ಯಕ್ರಮವು ನಮ್ಮ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿದೆ" ಎಂದು ಸಂತಸ ಹಂಚಿಕೊಂಡರು. ಗ್ರಾಮೀಣ ಭಾಗದ ಯುವಜನತೆಗೆ ಅನುಕೂಲವಾಗುವಂತೆ ಇಂತಹ ಅರ್ಥಪೂರ್ಣ ಹಾಗೂ ಉಪಯುಕ್ತ ಉದ್ಯೋಗ ಮೇಳವನ್ನು ಆಯೋಜಿಸಿದ ಗಂಗಾ ಸಮೂಹ ವಿದ್ಯಾ ಸಂಸ್ಥೆ ಮತ್ತು ಕನೆಕ್ಟ್ ಸಂಸ್ಥೆಯ ಕಾರ್ಯವನ್ನು ಪ್ರಶಂಸಿಸಿ, ಮುಕ್ತಕಂಠದಿಂದ ಶ್ಲಾಘಿಸಿದರು.



