ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಲಾ ಶಿಕ್ಷಣ ಇಲಾಖೆಯು ಆಯೋಜಿಸಿದ್ದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿತ್ರದುರ್ಗ ತಾಲ್ಲೂಕಿನ ಗೂಳಯ್ಯನಹಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟು 12 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಕೂಟದ 14 ವರ್ಷದೊಳಗಿನವರ ವಿಭಾಗದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು 4x100 ಮೀ. ರಿಲೇ ಹಾಗೂ 80 ಮೀ. ಹರ್ಡಲ್ಸ್‍ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಜೊತೆಗೆ 100 ಮೀ. ಮತ್ತು 200 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಂತೆಯೇ 16 ವರ್ಷದೊಳಗಿನವರ ವಿಭಾಗದಲ್ಲಿ 4x100 ಮೀ. ಹಾಗೂ 4x400 ಮೀ. ರಿಲೇ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ಶಾಲೆಯ ಪ್ರಾಚಾರ್ಯ ಎನ್.ಮಂಜುನಾಥರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಯ್ಯ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.




