ಚಂದ್ರವಳ್ಳಿ ನ್ಯೂಸ್, ಗದಗ:
ಸರ್ಕಾರದಿಂದ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗದೇ ಎದುರಾದ ತೀವ್ರ ಆರ್ಥಿಕ ಒತ್ತಡ ಹಾಗೂ ಗುತ್ತಿಗೆದಾರರ ಕಿರುಕುಳದಿಂದ ನೊಂದಿರುವುದಾಗಿ ಪತ್ರ ಬರೆದಿಟ್ಟು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಗದಗ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಫರ್ವಿಜ್ ಧಾರವಾಡ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಫರ್ವಿಜ್, ತಮ್ಮ ಉಪವಿಭಾಗಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದಿರುವುದರಿಂದ ಕಾಮಗಾರಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಗಂಭೀರ ಸ್ವರೂಪ ಪಡೆದಿವೆ ಎಂದು ಉಲ್ಲೇಖಿಸಿದ್ದಾರೆ.
ಕಾಮಗಾರಿಗಳ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸಬ್‌ಕಾಂಟ್ರಾಕ್ಟರ್‌ಗಳು (ಉಪಗುತ್ತಿಗೆದಾರರು) ಮನೆ ಬಳಿಗೆ ಬಂದು ಗಲಾಟೆ ಮಾಡುವುದಲ್ಲದೆ, ನಿತ್ಯ ದೂರವಾಣಿ ಮೂಲಕ ಹಣ ಬಿಡುಗಡೆಗಾಗಿ ಒತ್ತಡ ಹೇರುತ್ತಿದ್ದರು. ಇದರಿಂದ ತಮ್ಮ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿರುವ ಫರ್ವಿಜ್, ತಮ್ಮ ಉಪವಿಭಾಗಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸುವಂತೆ, ಬೇರೆ ಎಇಇಯನ್ನು ನಿಯೋಜಿಸುವಂತೆ ಹಾಗೂ ತಮ್ಮ ಕುಟುಂಬದವರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಮನವಿ ಮಾಡಿಕೊಂಡಿದ್ದರು.
ಘಟನೆ ಹಿನ್ನೆಲೆ: ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಮನೆಯಿಂದ ತೆರಳಿದ್ದ ಫರ್ವಿಜ್, ಬಳಿಕ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. ಹಲವು ದಿನ ಕಳೆದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಗಾಬಗೊಂಡ ಕುಟುಂಬಸ್ಥರು, ಸಂಬಂಧಿಕರು ಹಾಗೂ ಪರಿಚಯಸ್ಥರ ಬಳಿ ವಿಚಾರಿಸಿ ಹುಡುಕಾಟ ನಡೆಸಿದ್ದಾರೆ. ಯಾವುದೇ ಸುಳಿವು ಸಿಗದ ಕಾರಣ ಸೆಪ್ಟೆಂಬರ್ 16ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.
ಫರ್ವಿಜ್ ಅವರ ಪತ್ನಿ, ಪುತ್ರಿ, ತಂದೆ-ತಾಯಿ ಹಾಗೂ ಸಹೋದರರು ಸೇರಿದಂತೆ ಇಡೀ ಕುಟುಂಬ ಸದ್ಯ ತೀವ್ರ ಆತಂಕದಲ್ಲಿದ್ದು, ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. "ಫರ್ವಿಜ್ ಅವರನ್ನು ಆದಷ್ಟು ಬೇಗ ಪತ್ತೆಹಚ್ಚಬೇಕು. ಅವರಿಗೆ ಎದುರಾಗಿರುವ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ ಪರಿಹರಿಸಬೇಕು ಮತ್ತು ಕುಟುಂಬಕ್ಕೆ ರಕ್ಷಣೆ ನೀಡಬೇಕು" ಎಂದು ಕುಟುಂಬಸ್ಥರು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಕುಟುಂಬಸ್ಥರ ಆಕ್ರಂದನ: ಈ ಕುರಿತು ಮಾತನಾಡಿರುವ ಫರ್ವಿಜ್ ಅವರ ಸಹೋದರ ಸಾಹೀಲ್, "ಸೆ.13ರಂದು ದಿಢೀರ್ ಕಚೇರಿಯಿಂದ ಮನೆಗೆ ಬಂದು ಬೆಂಗಳೂರಿಗೆ ಹೋಗಬೇಕಿದೆ ಎಂದರು. ಅಂದೇ ಹಂಪಿ ರೈಲಿನ ಮೂಲಕ ಬೆಂಗಳೂರಿಗೆ ತೆರಳಿದರು. ಮರುದಿನ ಮುಂಜಾನೆ ಕರೆ ಮಾಡಿ ತಲುಪಿದ ಬಗ್ಗೆ ತಿಳಿಸಿದ್ದರು. ಆದರೆ ಮಧ್ಯಾಹ್ನದಿಂದ ಅವರ ಫೋನ್ ಸ್ವಿಚ್ಡ್ ಆಫ್ ಆಗಿದೆ. ಕೆಲಸದ ಒತ್ತಡ ಹಾಗೂ ಅನುದಾನ ಬಿಡುಗಡೆಯಾಗದ ಕಾರಣ ಉಪಗುತ್ತಿಗೆದಾರರು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎಲ್ಲ ಒತ್ತಡಗಳಿಂದ ಅವರು ಮಾನಸಿಕವಾಗಿ ನೊಂದಿದ್ದರು. ಚಿಕ್ಕ ಮಗುವಿದೆ, ಅವರನ್ನು ಆದಷ್ಟು ಬೇಗ ಹುಡುಕಿಕೊಡಿ" ಎಂದು ಕಣ್ಣೀರಿಟ್ಟಿದ್ದಾರೆ.
ಫರ್ವಿಜ್ ಅವರ ಮಾವ ಅಲ್ತಾಫ್ ಮಾತನಾಡಿ, "ಸರ್ಕಾರಿ ನೌಕರರಿಗೇ ರಕ್ಷಣೆ ಇಲ್ಲ ಎಂದರೆ ಇನ್ನು ಸಾಮಾನ್ಯ ಜನರ ಕಥೆ ಏನು? ಸರ್ಕಾರಿ ಅಧಿಕಾರಿಗಳೇ ಈ ರೀತಿ ಒತ್ತಡಕ್ಕೆ ಒಳಗಾದರೆ ಹೇಗೆ? ಫರ್ವಿಜ್ ಅವರನ್ನು ಸರ್ಕಾರವೇ ಹುಡುಕಿಕೊಡುವ ಕೆಲಸ ಮಾಡಬೇಕು. ತಂದೆ-ತಾಯಿ ಹಾಗೂ ಕುಟುಂಬಸ್ಥರು ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದ್ದಾರೆ" ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಫರ್ವಿಜ್ ಕೊನೆಯದಾಗಿ ಎಲ್ಲಿದ್ದರು, ಯಾರೊಂದಿಗೆ ಸಂಪರ್ಕದಲ್ಲಿದ್ದರು ಹಾಗೂ ಅವರ ಮೊಬೈಲ್ ಲೊಕೇಶನ್ ಆಧರಿಸಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




