ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪದವಿ, ಪಿಯುಸಿ ಮತ್ತು ಡಿಪ್ಲೊಮಾ ಮಟ್ಟದ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ನವೆಂಬರ್ ಮತ್ತು ಡಿಸೆಂಬರ್ ಮಾಹೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ.
ಹುದ್ದೆಗಳ ವಿವರ ಹಾಗೂ ಹಂಚಿಕೆ: ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: ಒಟ್ಟು 2,421 ಹುದ್ದೆಗಳು (ಉಳಿಕೆ ಮೂಲ ವೃಂದ: 1,912, ಕಲ್ಯಾಣ ಕರ್ನಾಟಕ: 509). ಇದರಲ್ಲಿ ಲೆಕ್ಕ ಸಹಾಯಕರು (502), ವಾರ್ಡನ್/ನಿಲಯ ಮೇಲ್ವಿಚಾರಕರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 (184), ಪ್ರಥಮ ದರ್ಜೆ ಸಹಾಯಕರು (FDA) ಮತ್ತು ವಾಣಿಜ್ಯ ತೆರಿಗೆ ಪರಿವೀಕ್ಷಕರು ಸೇರಿದಂತೆ ಪ್ರಮುಖ ಹುದ್ದೆಗಳಿವೆ.
ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: ಒಟ್ಟು 2,062 ಹುದ್ದೆಗಳು (ಉಳಿಕೆ ಮೂಲ ವೃಂದ: 1,548, ಕಲ್ಯಾಣ ಕರ್ನಾಟಕ: 514). ಇದರಲ್ಲಿ ದ್ವಿತೀಯ ದರ್ಜೆ ಸಹಾಯಕರು (SDA - 590+), ಗ್ರಾಮ ಪಂಚಾಯಿತಿ ಕಾರ್ಯದರ್ಶಿ/ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 (322) ಹಾಗೂ ಕಿರಿಯ ಲೆಕ್ಕ ಸಹಾಯಕ ಹುದ್ದೆಗಳು ಸೇರಿವೆ.
ಡಿಪ್ಲೊಮಾ ಮಟ್ಟದ ತಾಂತ್ರಿಕ ಹುದ್ದೆಗಳು: ಒಟ್ಟು 216 ಹುದ್ದೆಗಳು (ಉಳಿಕೆ ಮೂಲ ವೃಂದ: 185, ಕಲ್ಯಾಣ ಕರ್ನಾಟಕ: 31). ಸಹಾಯಕ ನಗರ ಯೋಜಕರು (119) ಮತ್ತು ವಿವಿಧ ಮಂಡಳಿ/ಇಲಾಖೆಗಳ ಜೂನಿಯರ್ ಇಂಜಿನಿಯರ್ (ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಪರೀಕ್ಷಾ ಪದ್ಧತಿ ಮತ್ತು ಪಠ್ಯಕ್ರಮ: ತಾಂತ್ರಿಕೇತರ ಹುದ್ದೆಗಳಿಗೆ (ಪದವಿ & ಪಿಯುಸಿ): ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021ರ ಪ್ರಕಾರ ಪತ್ರಿಕೆ-1 ಮತ್ತು ಪತ್ರಿಕೆ-2 ರಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ತಾಂತ್ರಿಕ ಹುದ್ದೆಗಳಿಗೆ (ಡಿಪ್ಲೊಮಾ): ಸಾಮಾನ್ಯ ಪತ್ರಿಕೆ-1 ರ ಜೊತೆಗೆ, ಹುದ್ದೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯದ ಪತ್ರಿಕೆ-2 (ಉದಾಹರಣೆಗೆ: ಜೂನಿಯರ್ ಇಂಜಿನಿಯರ್ ಸಿವಿಲ್ ಪಠ್ಯಕ್ರಮ) ಇರಲಿದೆ.
ಸೂಚಿಸಲಾದ ಹುದ್ದೆಗಳ ಸಂಖ್ಯೆ ಮತ್ತು ಇಲಾಖೆಗಳ ವಿವರಗಳು ಬದಲಾವಣೆಗೆ ಒಳಪಟ್ಟಿರುತ್ತವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.




