ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಸನ ಜಿಲ್ಲೆಯಲ್ಲಿ ಗಣೇಶೋತ್ಸವ ವಿಚಾರವಾಗಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನಡುವೆ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಹಾಗೂ ನೋಟಿಸ್ವಿವಾದ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಈ ಕುರಿತು ತೀವ್ರವಾಗಿ ಕಿಡಿಕಾರಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದು, ಎಸ್ಪಿಗೆ ನೋಟಿಸ್ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ನಡೆದ ಗಣೇಶೋತ್ಸವದ ಮೆರವಣಿಗೆ ಹಾಗೂ ದೇವಿಗೆರೆ ಪ್ರದೇಶದಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆ ವಿಚಾರವಾಗಿ ಎಸ್ಪಿಗೆ ಡಿಸಿ ಕೆ.ಎಸ್. ಲತಾಕುಮಾರಿ ನೋಟಿಸ್ ಜಾರಿ ಮಾಡಿದ್ದರು ಎನ್ನಲಾದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೆಚ್ಡಿಕೆ, ಅಧಿಕಾರಿಗಳು ತಮ್ಮ ಮಿತಿಯಲ್ಲಿ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಸಿ ಪಾಳೆಗಾರರಂತೆ ವರ್ತಿಸಬಾರದು: "ನಾನು ಸುಮ್ಮನೆ ಮಾತಾಡೋದಿಲ್ಲ. ಎಸ್ಪಿಗೆ ನೋಟಿಸ್ಕೊಡುತ್ತಾರೆ ಎಂದರೆ ಏನರ್ಥ? ಎಸ್ಪಿ ಕೂಡ ಹೆಣ್ಣು ಮಗಳು, ಜಿಲ್ಲಾಧಿಕಾರಿ ಏನು ಪಾಳೆಗಾರರಾ? ಎಲ್ಲರೂ ತಮ್ಮ ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ," ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಏನು ನಡೆಯುತ್ತಿದೆ?:
ಅಧಿಕಾರ ನಡೆಸುವಾಗ ದುರಹಂಕಾರದಿಂದ ವರ್ತಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ಸಾರ್ವಜನಿಕವಾಗಿ ಯಾರಾದರೂ ಮಾತನಾಡಿದರೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಅಷ್ಟು ಪರಿಜ್ಞಾನ ಇಲ್ಲವಾ ಈ ಜಿಲ್ಲಾಧಿಕಾರಿಗೆ? ಈ ಅಧಿಕಾರಿ ಹಿಂದೆ ಕೆಪಿಎಸ್ಸಿ ಕಾರ್ಯದರ್ಶಿಯಾಗಿದ್ದಾಗ ಏನೆಲ್ಲ ಮಾಡಿದ್ದರು ಎಂಬುದು ನಮಗೆ ಗೊತ್ತಿದೆ. ಅವರನ್ನು ಅಂದು ಅಮಾನತು ಮಾಡಬೇಕಿತ್ತು, ಅದನ್ನು ಬಿಟ್ಟು ರಕ್ಷಣೆ ನೀಡಿ ಹಾಸನ ಜಿಲ್ಲಾಧಿಕಾರಿಯಾಗಿ ತಂದು ಕೂರಿಸಿದ್ದಾರೆ," ಎಂದು ಸರ್ಕಾರದ ವಿರುದ್ಧವೂ ಕಿಡಿಕಾರಿದರು.
ಆಡಳಿತ ವ್ಯವಸ್ಥೆ ಕುಸಿಯುವ ಎಚ್ಚರಿಕೆ: ಐಪಿಎಸ್ಅಧಿಕಾರಿಗೆ ನೋಟಿಸ್ನೀಡಿದರೆ ಆಡಳಿತ ಹೇಗೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದ ಹೆಚ್ಡಿಕೆ, ಜ್ಞಾನವಿಟ್ಟುಕೊಂಡು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಬೀಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.



