Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅ.03ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ-ಕುಶಾಲ್ ಚೌಕ್ಸೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿ ಅಕ್ಟೋಬರ್ 03ರಂದು ಜರುಗಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆಗೆ ಯಾವುದೇ ರೀತಿಯ ಲೋಪಬಾರದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ  ಕಾರ್ಯಕ್ರಮಕ್ಕೆ ಸಂಬಂಸಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿ ಸದಸ್ಯರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ದೊಡ್ಡ ಮಟ್ಟದಲ್ಲಿ ಜನಸಂದಣಿ ಸೇರುವ ಪ್ರಮುಖ ಉತ್ಸವಗಳಲ್ಲಿ ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯೂ ಒಂದಾಗಿದೆ. ಈ ಬಾರಿಯ ಶೋಭಾಯಾತ್ರೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಸುಮಾರು 3 ರಿಂದ 4 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ  ಇದೆ.  ಕಳೆದ ಹಲವು ವರ್ಷಗಳಿಂದ ವಿವಿಧ ಇಲಾಖೆಗಳ ಉತ್ತಮ ಸಹಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ ಶೋಭಾಯಾತ್ರೆಯು ಅತ್ಯಂತ ಶಾಂತಿಯುತವಾಗಿ ನೆರವೇರುತ್ತಾ ಬಂದಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿಯೊಂದು ಇಲಾಖೆಯು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದರು.

ಶಾಂತಿ ಸುವ್ಯವಸ್ಥೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಮೆರವಣಿಗೆ ಸಾಗುವ ಪ್ರಮುಖ ಮಾರ್ಗಗಳಲ್ಲಿ ಶೀಘ್ರದಲ್ಲೇ ಪೊಲೀಸರಿಂದ ‘ರೂಟ್ ಮಾರ್ಚ್’ (ಪಥಸಂಚಲನ) ನಡೆಸಲಾಗುವುದು. ಸಾರ್ವಜನಿಕರು ಹಾಗೂ ಸಂಘಟಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯನ್ನು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಭದ್ರತೆ ಹಾಗೂ ಬಂದೋಬಸ್ತ್ ಕೇವಲ ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಾಗಿರದೆ, ಪ್ರತಿಯೊಂದು ಇಲಾಖೆಯ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. ವಿವಿಧ ಇಲಾಖೆಗಳಿಗೆ ವಹಿಸಲಾಗಿರುವ ಜವಾಬ್ದಾರಿಗಳ ಕುರಿತು ಈಗಾಗಲೇ ಪತ್ರಗಳನ್ನು ತಲುಪಿಸಲಾಗಿದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ, ವಾಚ್ ಟವರ್ ನಿರ್ಮಾಣ, ಬ್ಯಾನರ್ ಮತ್ತು ಪ್ಲೆಕ್ಸ್ ನಿಯಂತ್ರಣ ಕ್ರಮಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಸಾರ್ವಜನಿಕ ಭದ್ರತೆಯ ದೃಷ್ಠಿಯಿಂದ ಲೋಕೋಪಯೋಗಿ ಇಲಾಖೆ ಹಾಗೂ ಸಾರಿಗೆ ಇಲಾಖೆಯಿಂದ ವಾಹನಗಳು ಮತ್ತು ವೇದಿಕೆಗಳ ಫಿಟ್‍ನೆಸ್ ಪ್ರಮಾಣಪತ್ರಗಳನ್ನು ಸಮಯಕ್ಕೆ ಸರಿಯಾಗಿ ಪಡೆಯುವುದು ಕಡ್ಡಾಯ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಪ್ರತಿದಿನವೂ ಕೈಗೊಂಡ ಕಾರ್ಯಗಳ ಪರಿಶೀಲನೆ ನಡೆಸಬೇಕು ಎಂದರು.

  ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಈ ಬಾರಿಯೂ ಅದೇ ಮಾದರಿಯಲ್ಲಿ ಅತ್ಯಂತ ಶಿಸ್ತಿನಿಂದ ಕಾರ್ಯಕ್ರಮ ಪೂರ್ಣಗೊಳ್ಳಬೇಕು. ಮೆರವಣಿಗೆ ಸಾಗುವ ಹಾದಿಯಲ್ಲಿ ಜನರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಹಾಗೂ ಭದ್ರತೆ ಹೆಚ್ಚಿಸಲು ಯಾವುದೇ ಹೊಸ ಕ್ರಿಯಾತ್ಮಕ ಸಲಹೆಗಳಿದ್ದರೆ ಮುಂದಿನ ನಾಲ್ಕು ದಿನಗಳಲ್ಲಿ ನಮ್ಮ ಗಮನಕ್ಕೆ ತರಬಹುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಮಾತನಾಡಿ, ಕಳೆದ 20 ವರ್ಷಗಳಿಂದ ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳ ಸಹಯೋಗದಲ್ಲಿ ಹಿಂದೂ ಮಹಾಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಿ, ಶೋಭಾಯಾತ್ರೆಯೊಂದಿಗೆ ವಿಸರ್ಜನಾ ಕಾರ್ಯ ನಡೆಸುತ್ತಾ ಬರಲಾಗುತ್ತಿದೆ. 2025ನೇ ಸಾಲಿನಲ್ಲಿ ನಡೆದ ಶೋಭಾಯಾತ್ರೆ ಸಮಯದಲ್ಲಿ ಸುಮಾರು 3 ರಿಂದ 3.20 ಲಕ್ಷ ಜನರು ಭಾಗವಹಿಸಿದ್ದು, ರಾತ್ರಿ 10ಕ್ಕೆ ಶಾಂತಿಯುತವಾಗಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಅ.03ರಂದು ಪ್ರತಿಷ್ಠಾಪನಾ  ಸ್ಥಳದಿಂದ ಚಂದ್ರವಳ್ಳಿವರೆಗೆ ಬೃಹತ್ ಶೋಭಾಯಾತ್ರೆ ಮುಖಾಂತರ ಗಣೇಶ ಮೂರ್ತಿ ವಿಸರ್ಜನೆ ಮಾಡಲಿದ್ದು, ಶೋಭಾಯಾತ್ರೆಯಲ್ಲಿ ಸುಮಾರು 4 ಲಕ್ಷ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದರು.

ಶೋಭಾಯಾತ್ರೆ ಯಶಸ್ವಿ ನಿರ್ವಹಣೆಗಾಗಿ ಈಗಾಗಲೇ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪ್ರಮುಖ ಮಾರ್ಗಗಳ ಪರಿಶೀಲನೆ ನಡೆಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಘಟಕರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಎಂದರು.

ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಶೋಭಾಯಾತ್ರೆ ಸಾಗುವ ವೇಳೆಯಲ್ಲಿ ಸಾರ್ವಜನಿಕರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ವಾಹನ ಸಂಚಾರ ಸುಗಮವಾಗಿರಬೇಕು ಮತ್ತು ತುರ್ತು ಸೇವೆಗಳಿಗೆ ಯಾವುದೇ ಅಡಚಣೆಯಾಗದಂತೆ ಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದೆ ಸೌಹಾರ್ದಯುತವಾಗಿ ಯಶಸ್ವಿಗೊಳ್ಳಲು ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳು ಹಾಗೂ ಉತ್ಸವ ಸಮಿತಿಯ ಸಂಘಟಕರು ಪರಸ್ಪರ ಸಹಕಾರ ನೀಡಬೇಕು ಎಂದರು.

  ಶೋಭಾಯಾತ್ರೆಯಲ್ಲಿ ಭಾಗವಹಿಸುವ ಆಯೋಜಕರು ಹಾಗೂ ಸ್ವಯಂಸೇವಕರಿಗೆ ನಿರ್ದಿಷ್ಟ ಬಣ್ಣದ ಟಿ-ಷರ್ಟ್ ವ್ಯವಸ್ಥೆ ಮಾಡಬೇಕು. ಸ್ವಯಂಸೇವಕರ ಪಟ್ಟಿಯನ್ನು ಮುಂಚಿತವಾಗಿಯೇ ಪೊಲೀಸ್ ಇಲಾಖೆಗೆ ಸಲ್ಲಿಸಬೇಕು. ಶೋಭಾಯಾತ್ರೆಗೂ ಮುನ್ನ ಅವರಿಗೆ ಪೊಲೀಸ್ ಅಧಿಕಾರಿಗಳಿಂದ ಸೂಕ್ತ ಬ್ರೀಫಿಂಗ್ ನೀಡಲಾಗುವುದು ಎಂದರು.

ಜನಸಾಮಾನ್ಯರು, ಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಈಗಾಗಲೇ ಹೊರಡಿಸಿರುವ ಆದೇಶದಂತೆ ಬಂಟಿಂಗ್ಸ್, ಪೇಪರ್ ಬ್ಲಾಸ್ಟರ್ಸ್ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೊಲೀಸ್ ಇಲಾಖೆಯ ಅನುಮತಿ ಇಲ್ಲದೆ ಖಾಸಗಿಯವರು ಡ್ರೋನ್ ಕ್ಯಾಮೆರಾ ಹಾರಿಸುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಡ್ರೋನ್ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು. ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದಲೇ 5-6 ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಕಣ್ಗಾವಲು ಇರಿಸಲಾಗುವುದು ಎಂದರು.

 ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಂದರ್ಭದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ಮುಖ್ಯ ರಸ್ತೆಯಲ್ಲಿ ಪ್ರಸಾದ ವಿತರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಅಡ್ಡ ರಸ್ತೆಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಸೂಚನೆ ನೀಡಿದರು.

ಈ ಬಾರಿ ಪ್ರಸಾದ ವಿತರಣಾ ಕೌಂಟರ್‍ಗಳ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಆಹಾರ ಇಲಾಖೆಯ ಅಧಿಕಾರಿಗಳ ತಂಡ ಪ್ರಸಾದದ ಗುಣಮಟ್ಟ ತಪಾಸಣೆ ನಡೆಸಿದ ನಂತರವಷ್ಟೇ ವಿತರಣೆಗೆ ಅವಕಾಶ ನೀಡಲಾಗುವುದು ಎಂದರು.

ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳು ಆಗಮಿಸುವುದರಿಂದ ಕುಡಿಯುವ ನೀರು ಹಾಗೂ ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯನ್ನು ಸೂಕ್ತ ಸ್ಥಳಗಳಲ್ಲಿ ಗುರುತಿಸಿ ಕಲ್ಪಿಸುವಂತೆ ಆಯೋಜಕರಿಗೆ ಎಎಸ್‍ಪಿ ಸಲಹೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಚಿತ್ರದುರ್ಗ ಡಿವೈಎಸ್‍ಪಿ ಅರುಣ್ ನಾಗೇಗೌಡ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ನಗರಸಭೆ ಪೌರಾಯುಕ್ತೆ ಲಕ್ಷ್ಮೀ,  ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಸಮಿತಿಯ ಸಂಘಟಕರು ಇದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅ.03ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ-ಕುಶಾಲ್ ಚೌಕ್ಸೆಧರ್ಮಸ್ಥಳ ಸಂಸ್ಥೆಯ ಕೆರೆ ಹೂಳೆತ್ತುವ ಕಾರ್ಯಕ್ರಮ ಶ್ಲಾಘನೀಯ:ಮಹೇಶ್ರೈತ ಹೋರಾಟಗಾರರ ಮೇಲಿನ ಕೇಸ್‌ಗಳನ್ನು ವಜಾಗೊಳಿಸಲು ರೈತ ಸಂಘ ಆಗ್ರಹಎನ್‌ಡಿಎ ಅಭ್ಯರ್ಥಿ ರಂಗನಾಥ್ ರವರ ಗೆಲುವು ನಮ್ಮೆಲ್ಲರ ಜವಾಬ್ದಾರಿ-- ಧೀರಜ್ ಮುನಿರಾಜ್ವಾರದಲ್ಲೇ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ವಿತರಣೆಗೆ ವಾರ್ತಾ ಇಲಾಖೆ ಸಿದ್ಧತೆಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ನಿಜ: ಡಿಸಿಎಂ ಜಿ.ಪರಮೇಶ್ವರ್ ಒಪ್ಪಿಗೆ'ಭಾರತ್ ಜೋಡೋ-2' ಅಭಿಯಾನಕ್ಕೆ ಚಾಲನೆ: 84 ಸೋತ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು!ಪ್ರಧಾನಿ ಮೋದಿ ರಾಜೀನಾಮೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹನೈಸ್‌ಯೋಜನೆ ಕುಮಾರಸ್ವಾಮಿ ಅಥವಾ ದೇವೇಗೌಡರ ಕೂಸಲ್ಲ: ಬೃಹತ್ ಹಗರಣವೆಂದು ಡಿಕೆಶಿ ವಿರುದ್ಧ ಹೆಚ್‌ಡಿಕೆ ಬಾಂಬ್!ಪ್ರತಿಭಟನೆ ಬಿಟ್ಟು ದೆಹಲಿಗೆ ಬನ್ನಿ: ಕಬ್ಬು ಬೆಳೆಗಾರರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಕ್ತ ಆಹ್ವಾನ!