ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ಪ್ರಾಚೀನ ಜ್ಞಾನ ಮತ್ತು ಸಾಹಿತ್ಯ ಪರಂಪರೆಗೆ ಮತ್ತೊಮ್ಮೆ ಜಾಗತಿಕ ಮನ್ನಣೆ ಲಭಿಸಿದ್ದು, ಕಾಶ್ಮೀರದ ಇತಿಹಾಸ ಸಾರುವ ಕಲ್ಹಣನ ‘ರಾಜತರಂಗಿಣಿ’, ಮಹಾಕಾವ್ಯ ‘ಮಹಾಭಾರತ’ ಹಾಗೂ ಕೌಟಿಲ್ಯನ ಆಡಳಿತ ಗ್ರಂಥ ‘ಅರ್ಥಶಾಸ್ತ್ರ’ ಕೃತಿಗಳ ಪ್ರಾಚೀನ ಹಸ್ತಪ್ರತಿಗಳು ಯುನೆಸ್ಕೋದ ಏಷ್ಯಾ ಮತ್ತು ಪೆಸಿಫಿಕ್ಪ್ರಾದೇಶಿಕ ‘ಸ್ಮೃತಿ ವಿಶ್ವ’ ನೋಂದಣಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿವೆ.
ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಯುನೆಸ್ಕೋದ 11ನೇ ಅಧಿವೇಶನದಲ್ಲಿ ಈ ಮಹತ್ವದ ಗೌರವ ಘೋಷಿಸಲಾಗಿದೆ.
ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಯತ್ನದಿಂದ ನಾಮನಿರ್ದೇಶನಗೊಂಡಿದ್ದ ಈ ಕೃತಿಗಳು, ಇತಿಹಾಸ ದಾಖಲಿಸುವ ವಿಧಾನ, ಜೀವನ ಮೌಲ್ಯಗಳು ಹಾಗೂ ಉತ್ತಮ ಆಡಳಿತದ ಸೂತ್ರಗಳನ್ನು ಜಗತ್ತಿಗೆ ಪರಿಚಯಿಸಿವೆ. ಈ ಹಿಂದಿನ ಕೃತಿಗಳೊಂದಿಗೆ ಸೇರಿ ಈಗ ಭಾರತದ ಒಟ್ಟು ಪ್ರಾದೇಶಿಕ ನೋಂದಣಿಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.




