ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಝಾಕಿಸ್ತಾನದ ಅಲ್ಮಾಟಿಯಲ್ಲಿ ನಡೆಯಲಿರುವ 21ನೇ ಏಷ್ಯನ್ ಮಹಿಳಾ ಹ್ಯಾಂಡ್ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ರಾಷ್ಟ್ರೀಯ ತಂಡಕ್ಕೆ ಚಿತ್ರದುರ್ಗದ ಪ್ರತಿಭಾನ್ವಿತ ಕ್ರೀಡಾಪಟು ಎಸ್. ಪೂಜಾ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗದ ಶ್ರೀನಿವಾಸ್ ಅವರ ಪುತ್ರಿ ಪೂಜಾ, ಹ್ಯಾಂಡ್ಬಾಲ್ ಇತಿಹಾಸದಲ್ಲಿ ಕರ್ನಾಟಕದಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮೊದಲ ಮಹಿಳಾ ಕ್ರೀಡಾಪಟು ಎಂಬ ಐತಿಹಾಸಿಕ ಕೀರ್ತಿಗೆ ಭಾಜನರಾಗಿದ್ದಾರೆ.
ನವೆಂಬರ್ 23ರಿಂದ ಡಿಸೆಂಬರ್ 3ರವರೆಗೆ ಕಝಾಕಿಸ್ತಾನದಲ್ಲಿ ಈ ಪ್ರತಿಷ್ಠಿತ ಕ್ರೀಡಾಕೂಟ ನಡೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯಲ್ಲಿ ಭಾರತ ತಂಡವು 'ಬಿ' ಗುಂಪಿನಲ್ಲಿ ಸೆಣಸಾಡಲಿದೆ. ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿರುವ ಪೂಜಾ ಅವರ ಈ ಸಾಧನೆಗೆ ಕ್ರೀಡಾ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕಝಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಮುನ್ನ ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಎಸ್. ಪೂಜಾ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ದೇಶಕ್ಕೆ ಕೀರ್ತಿ ತರುವಂತೆ ಶುಭ ಹಾರೈಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಹ್ಯಾಂಡ್ಬಾಲ್ ತರಬೇತುದಾರರಾದ ಶಿವರಾಮ್ ಹಾಗೂ ಪೂಜಾ ಅವರ ಪೋಷಕರು ಉಪಸ್ಥಿತರಿದ್ದರು.




