ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಕರುನಾಡಿನ ನೆಲ ಹಾಗೂ ಜಲದ ವಿಚಾರಗಳಲ್ಲಿ ನಡೆದ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ ಇದೆ ಎಂದು ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಚುನಾವಣೆ ಹಿನ್ನಲೆಯಲ್ಲಿ ಹಿರಿಯೂರು ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ವಿವಿಧ ಜನಪರ ಸಂಘಟನೆಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪ್ರಾತಿನಿಧಿಕ ಸಂಸ್ಥೆ. ನೆಲ, ಜಲದ ಪ್ರಶ್ನೆ ಎದುರಾದಾಗ ಹೋರಾಟದ ಮುಂಚೂಣಿ ವಹಿಸಬೇಕು. ಕನ್ನಡವೆಂದರೆ ಬರೀ ಭಾಷೆಯಲ್ಲ, ಅದೊಂದು ಬದುಕು. ಸಹಜ ಬದುಕಿಗೆ ಎದುರಾಗುವ ಸಂಕಟಗಳಿಗೆ ಕಸಾಪ ಮುಖಾಮುಖಿಯಾಗಬೇಕೆಂದರು.
ಭದ್ರಾ ಮೇಲ್ದಂಡೆ ನೀರು ಜಿಲ್ಲೆಗೆ ಹರಿದು ಬರುತ್ತಿರುವುದರ ಹಿಂದೆ ಜನಸಮುದಾಯದ ಹೋರಾಟವಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಲ್ಲಿ ಎಂಟು ಸಾವಿರ ಸದಸ್ಯರಿದ್ದು ಇವರೆಲ್ಲರೂ ಬೀದಿಗೆ ಇಳಿಯಬಹುದಿತ್ತು. ಇದು ಸಾಧ್ಯವಾಗದೇ ಹೋಗಿದೆ. ಕಡು ಬಡವರಿಗೆ ಭೂಮಿ ಹಂಚಿಕೆ ವಿಚಾರದಲ್ಲಿಯೂ ಕಸಾಪ ದನಿಗೂಡಿಸಬೇಕಾಗಿದೆ ಎಂದರು.
ಎಲ್ಲ ಜಿಲ್ಲೆಗಳಲ್ಲಿಯೂ ಕನ್ನಡಭವನಗಳಿದ್ದು , ಚಿತ್ರದುರ್ಗ ಮಾತ್ರ ಅದರ ಕೊರತೆ ಅನುಭವಿಸುತ್ತಿದೆ. ಜಿಲ್ಲೆಯ ಜನ ಸಮುದಾಯಗಳ ಹೋರಾಟಗಳಿಗೆ ದನಿಗೂಡಿಸುವುದು ಹಾಗೂ ಕನ್ನಡಭವನ ನಿರ್ಮಾಣದ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಚಿಕ್ಕಪ್ಪನಹಳ್ಳಿ ಷಣ್ಮುಖ ಮನವಿ ಮಾಡಿದರು.
ಗೊಲ್ಲಹಳ್ಳಿ ಜೆಟ್ ಶಾಲೆ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ ಮಾತನಾಡಿ ಷಣ್ಮುಖಪ್ಪನವರದು ಸಂಘರ್ಷದ ಮೂಲಕ ಸಂವಹನಕ್ಕೆ ಬರುವ ಮನಸ್ಥಿತಿಯವರು. ಭದ್ರಾ ಮೇಲ್ದಂಡೆ ಯೋಜನೆ ಕುರಿತು ಅವರ ಹೋರಾಟ ಅವಿಸ್ಮರಣೀಯವಾದುದು. ನೀರಾವರಿ ಕುರಿತು ಅವರು ಬರೆದಿರುವ ಬರಹಗಳೇ ಒಂದು ದೊಡ್ಡ ಗ್ರಂಥವಾಗಲಿದೆ. ಅಕ್ಷರಗಳ ಮೂಲಕ ಸಮಾಜ ತಿದ್ದುವ ಕಾಯಕ ಮಾಡಿಕೊಂಡು ಬರುತ್ತಿರುವ ಷಣ್ಮುಖಪ್ಪ ಕನ್ನಡದ ತೇರು ಎಳೆಯುವ ಕಾಯಕಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕಿದೆ ಎಂದರು.

ಸಾಹಿತಿ ಎಂ ಜಿ ರಂಗಸ್ವಾಮಿ ಮಾತನಾಡಿ ಕಸಾಪ ದಾರಿ ಸುಲಭದ್ದಲ್ಲ. ಕಲ್ಲು ಮುಳ್ಳಿನ ಹಾದಿ ಇದು. ಇಲ್ಲಿ ಅಪಾರವಾದ ಅನುದಾನ ಇರುವುದಿಲ್ಲ. ಮನೆ ಮಠ ತೊರೆದು ಕನ್ನಡ ಸೇವೆ ಮಾಡುವ ಮನಸಿರುವವರು ಮಾತ್ರ ಕಸಾಪ ಅಧ್ಯಕ್ಷರಾಗಲು ಸಾಧ್ಯ. ಹುಚ್ಚು ಆಸಕ್ತಿ ಇರುವವರು ಮಾತ್ರ ಕನ್ನಡ ಸಾಹಿತ್ಯ ಪರಿಷತ್ ಗೆ ಅಧ್ಯಕ್ಷ ರಾಗಬೇಕು. ಷಣ್ಮುಖಪ್ಪನವರಿಗೆ ಅಂತಹುದೊಂದು ಹಠವಿದೆ. ಪ್ರಾಮಾಣಿಕತೆ ಇದೆ. ವೃತ್ತಿಯೇತರ ಆಸಕ್ತಿಯಿಂದ ಜಿಲ್ಲೆಯಾದ್ಯoತ ಭದ್ರಾ ಮೇಲ್ದoಡೆ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ.ಅವರ ಗೆಲುವಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ ಜಯಣ್ಣ ಮಾತನಾಡಿ ಜಿಲ್ಲೆಯಲ್ಲಿ ದಕ್ಷರು, ನೇರವಾದಿಗಳು ಎಂದು ಹೆಸರು ಮಾಡಿರುವ ಷಣ್ಮುಖಪ್ಪನವರನ್ನು ಬೆಂಬಲಿಸಬೇಕಾದ್ದು ನಮ್ಮ ಕರ್ತವ್ಯ. ಕಸಾಪದಂತಹ ಕನ್ನಡ ಕಟ್ಟುವ ಸಂಸ್ಥೆಗೆ ಷಣ್ಮುಖಪ್ಪರಂತಹ ಬದ್ಧತೆ ಇರುವವರು ಅಧ್ಯಕ್ಷರಾಗಬೇಕು. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇರಲಿದೆ ಎಂದರು.
ರೈತ ಮುಖಂಡ ಕಸವನಹಳ್ಳಿ ರಮೇಶ್ ಮಾತನಾಡಿ ತಮ್ಮದೇ ಮೊನಚು ಬರಹಗಳ ಮೂಲಕ ಎಲ್ಲರ ಗಮನಸೆಳೆದು ಜಿಲ್ಲೆಯಲ್ಲಿ ತಮ್ಮದೇ ಆದ ಬಹುದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಷಣ್ಮುಖಪ್ಪರಂತಹ ಚಿಂತನಶೀಲ ವ್ಯಕ್ತಿಗೆ ಅವಕಾಶ ಮಾಡಿಕೊಡಬೇಕು. ನಾವೆಲ್ಲರೂ ಅವರ ಬೆನ್ನಿಗೆ ಸದಾ ನಿಲ್ಲಲಿದ್ದೇವೆ ಎಂದರು.
ಪ್ರಾಸ್ತಾವಿಕವಾಗಿ ಜಡೇಕುಂಟೆ ಮಂಜುನಾಥ್ ಮಾತನಾಡಿ ಇದು ಅಭಿಪ್ರಾಯ ಸಂಗ್ರಹ ಮಾಡುವ ಸಭೆಯಾಗಿದೆ. ಕಳೆದ ಬಾರಿ ಪರಾಭವಗೊಂಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಆರಂಭಿಕ ಚಾಲನೆ ಕೊಟ್ಟು ಯೋಜನೆ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರು ಬಿಡುವ ತನಕ ಅಕ್ಷರಗಳ ಮೂಲಕ, ಬೀದಿಗಿಳಿದು ಜನರೊಂದಿಗೆ ಹೋರಾಡುವ ಮೂಲಕ ಜಿಲ್ಲೆಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು.
ಸಭೆಯಲ್ಲಿ ಅಭಿನಂದನ್, ಶಂಕರಮೂರ್ತಿ, ಹನುಮಂತರಾಯಪ್ಪ, ಕೆಸಿ ಹೊರಕೇರಪ್ಪ, ಸಕ್ಕರ ರಂಗಸ್ವಾಮಿ, ಎಂಡಿ ರವಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಾ ವಿ ನಾಗೇಶ್, ವಕೀಲರ ಸಂಘದ ಅಧ್ಯಕ್ಷ ಟಿ.ಸಂಜಯ್, ಪ್ರಾoಶುಪಾಲ ಡಾ.ವಿ ವೀರಣ್ಣ, ಕರವೇ ಗೋ ಬಸವರಾಜ್, ಕೆಪಿ ಶ್ರೀನಿವಾಸ್, ರಾಘವೇಂದ್ರ, ಚನ್ನಕೇಶವ ಗೌಡ, ಹರ್ತಿಕೋಟೆ ಮಹಾಸ್ವಾಮಿ, ಎಂ ಡಿ ರಮೇಶ್, ಹೆಚ್ ಟಿ ಪ್ರಸನ್ನ, ಡಿಸಿ ಪಾಣಿ, ದಿವು ಶಂಕರ್ ಮುಂತಾದವರು ಹಾಜರಿದ್ದರು.




