ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯ ನಿವಾಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಡಾ. ಕೆ.ಎಂ. ವೀರೇಶ್ (66) ಅವರು ಭಾನುವಾರ (ಸೆಪ್ಟೆಂಬರ್ 20) ರಾತ್ರಿ 9 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ:
ಅಪಾರ ಶಿಕ್ಷಣ ಪ್ರೇಮಿ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಿಂತಕರಾಗಿದ್ದ ಡಾ. ಕೆ.ಎಂ. ವೀರೇಶ್ ಅವರು ಚಿತ್ರದುರ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನಗಳನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿ, ಸಂಘಟನಾ ಚತುರರೆನಿಸಿಕೊಂಡಿದ್ದರು.
ಇಂದು ಅಂತ್ಯಕ್ರಿಯೆ:
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸೋಮವಾರ (ಸೆಪ್ಟೆಂಬರ್ 21) ಬೆಳಿಗ್ಗೆ 7 ಗಂಟೆಯಿಂದ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಯ ನಂತರ ಕೂಡ್ಲಿಗಿ ತಾಲ್ಲೂಕಿನ ಕಾನಾಮಡುಗು ಗ್ರಾಮದ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




