ಚಂದ್ರವಳ್ಳಿ ನ್ಯೂಸ್, ಮೈಸೂರು:
ತಮ್ಮ ದತ್ತು ವಂಶ ಹಾಗೂ ಸಂಸದರಾಗಿ ಮಾಡಿರುವ ಕೆಲಸಗಳ ಕುರಿತು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ದತ್ತು ಸ್ವೀಕಾರದ ವಿಚಾರವಾಗಿ ಮಾತನಾಡಿದ ಸಂಸದ ಯದುವೀರ್, "ನಾನು ದತ್ತುಪುತ್ರ ಎಂಬುದು ಸತ್ಯ. ಆದರೆ, ಭಾರತೀಯ ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನ ಪ್ರಜೆಗಳೇ ಹೊರತು ಯಾರಿಗೂ ವಿಶೇಷ ಸ್ಥಾನಮಾನವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯದಲ್ಲಿ ವೈಯಕ್ತಿಕ ದಾಳಿಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದಿರುವ ಅವರು, ರಾಜ್ಯ ಮತ್ತು ಕ್ಷೇತ್ರದ ಜನರು ರಾಜಕಾರಣದಲ್ಲಿ ಸಕಾರಾತ್ಮಕ ಬದಲಾವಣೆ ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದ ನಾಯಕರು ವೈಯಕ್ತಿಕ ಟೀಕೆಗಳನ್ನು ಬದಿಗಿಟ್ಟು ಜನರ ಸಮಸ್ಯೆ, ವಿಚಾರ ಹಾಗೂ ನೀತಿ-ನಿಯಮಗಳ ಆಧಾರದ ಮೇಲೆ ಚರ್ಚೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಸಂಸದರಾಗಿ ತಾವು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ವ್ಯಂಗ್ಯವಾಗಿ ಉತ್ತರಿಸಿದ ಯದುವೀರ್, "ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರ ಪುಸ್ತಕ ಅಥವಾ ತಮ್ಮ ಪಕ್ಷದ ಪತ್ರಿಕೆಗಳನ್ನು ಓದುವುದನ್ನು ಬಿಟ್ಟು ಸುದ್ದಿ ವಾಹಿನಿಗಳನ್ನು ನೋಡಿದರೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ," ಎಂದು ಹೇಳಿದ್ದಾರೆ.




