ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮುಖ್ಯ ಚುನಾವಣಾಧಿಕಾರಿ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರು ತಮ್ಮ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಸುಪ್ರೀಂ ಕೋರ್ಟ್‌ಗೆ ಹಮ್ಮಿಕೊಂಡಿದ್ದ ಮೆರವಣಿಗೆಗೂ ಮುನ್ನ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ಜ್ಞಾನೇಶ್ ಕುಮಾರ್ ಅವರೇ ನೀವು ತಪ್ಪು ಮಾಡಿದ್ದೀರಿ. ಆ ತಪ್ಪಿನ ಹಿಂದಿನ ಸೂತ್ರಧಾರ ನೀವಲ್ಲ, ನೀವು ಒತ್ತಡದಲ್ಲಿದ್ದೀರಿ ಎಂಬುದೂ ನಮಗೆ ಗೊತ್ತು. ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಮಾಫಿ ಸಾಕ್ಷಿಯಾಗಿ" ಎಂದು ಒತ್ತಾಯಿಸಿದರು.
ಸಂವಿಧಾನದ ಆಶಯಗಳು ಗೆಲ್ಲುವವರೆಗೆ ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ ರಾಹುಲ್ ಗಾಂಧಿ, ವಿರೋಧ ಪಕ್ಷಗಳ ಮೆರವಣಿಗೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಿಯೋಜಿಸಲಾದ ಭಾರಿ ಭದ್ರತೆಯ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ಕೇವಲ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರವು ದೆಹಲಿಯನ್ನು ದಿಗ್ಬಂಧನಕ್ಕೆ ಒಳಪಡಿಸಿದೆ. ರಸ್ತೆಗಳಲ್ಲಿ 30 ಸಾವಿರ ಭದ್ರತಾ ಸಿಬ್ಬಂದಿ ಏಕೆ ಇದ್ದಾರೆ? ಭಾರತದ ರಾಜಧಾನಿ ಏಕೆ ಜೈಲಿನಂತಾಗಿದೆ?" ಎಂದು ಪ್ರಶ್ನಿಸಿದ ಅವರು, ರಾಷ್ಟ್ರ ರಾಜಧಾನಿಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುಕ್ತವಾಗಿ ಓಡಾಡಲು ಹಾಗೂ ಪ್ರತಿಭಟಿಸುತ್ತಿರುವ ಯುವಕರ ಮೇಲೆ ಹಲ್ಲೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿದರು.
ಮುಂದುವರಿದು ಮಾತನಾಡಿದ ಅವರು, "ಸಿಇಸಿ ಅವರನ್ನು ರಕ್ಷಿಸುವ ಮೂಲಕ ಸರ್ಕಾರವು ದೊಡ್ಡ ತಪ್ಪು ಮಾಡುತ್ತಿದೆ. ಇದು ಜನರು ಹಾಗೂ ಮೋದಿ, ಶಾ ಮತ್ತು ಜ್ಞಾನೇಶ್ ನಡುವಿನ ಹೋರಾಟವಾಗಿದೆ. ಎಲ್ಲಾ ವಿರೋಧ ಪಕ್ಷಗಳು ಒಂದು ಕಡೆಯಿದ್ದರೆ, ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಮತ್ತು ಜ್ಞಾನೇಶ್ ಕುಮಾರ್ ಇನ್ನೊಂದು ಕಡೆಯಲ್ಲಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಸ್ಫೋಟಕ ಹೇಳಿಕೆ ನೀಡಿರುವ ರಾಹುಲ್ ಗಾಂಧಿ, "ಕೇಂದ್ರ ಸರ್ಕಾರದಲ್ಲಿನ 200ಕ್ಕೂ ಅಧಿಕ ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಎಲ್ಲಾ ಬೆಳವಣಿಗೆಗಳ ಬಗ್ಗೆ ನಮಗೆ ನಿರಂತರವಾಗಿ ಮಾಹಿತಿ ರವಾನಿಸುತ್ತಿದ್ದಾರೆ" ಎಂದು ತಿಳಿಸಿದರು.




