ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದ “ಕೆಪಿಎಸ್‌ಸಿ ಉಳಿಸೋಣ!” ಅಭಿಯಾನಕ್ಕೆ ರಾಜ್ಯದ ಯುವಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕೇವಲ ಕೆಲವೇ ದಿನಗಳಲ್ಲಿ 2,500ಕ್ಕೂ ಹೆಚ್ಚು ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳು ತಮ್ಮ ಅಭಿಪ್ರಾಯ ಹಾಗೂ ಆಕ್ರೋಶಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಅಭಿಯಾನಕ್ಕೆ ಬಂದಿರುವ ಪ್ರತಿಕ್ರಿಯೆಗಳು ಇಂದಿನ ಯುವಜನತೆಯ ಆಕ್ರೋಶ ಮತ್ತು ನೋವಿನ ಸ್ಪಷ್ಟ ಪ್ರತಿಬಿಂಬವಾಗಿವೆ ಎಂದು ಹೇಳಿದ್ದಾರೆ.
ಯುವಜನತೆಯ ಆಕ್ರೋಶಕ್ಕೆ ಸಿಕ್ಕ ಪ್ರತಿಬಿಂಬ:
ಕೆಪಿಎಸ್‌ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳಿಂದಾಗಿ ಕಷ್ಟಪಟ್ಟು ಓದಿದ ಯುವಕರ ಭವಿಷ್ಯ ಹಾಳಾಗುತ್ತಿರುವುದನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಯುವಜನತೆ ಈ ಅಭಿಯಾನದ ಮೂಲಕ ನೀಡಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.
ಸದನ ಸಮಿತಿಗೆ ತಲುಪಲಿದೆ ಯುವಕರ ಧ್ವನಿ:
"ಅಭಿಯಾನದಲ್ಲಿ ಯುವ ಮಿತ್ರರು ಹಂಚಿಕೊಂಡಿರುವ ಪ್ರತಿಯೊಂದು ಸಲಹೆ, ಅಭಿಪ್ರಾಯ ಮತ್ತು ನೋವಿನ ಸಂಗತಿಗಳನ್ನು ಸದನ ಸಮಿತಿಗೆ ತಲುಪಿಸುವ ಜವಾಬ್ದಾರಿಯನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದೇನೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ KPSC ಪುನರ್ ರೂಪಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ" ಎಂದು ಅವರು ಭರವಸೆ ನೀಡಿದ್ದಾರೆ.
ಸಲಹೆ ನೀಡಲು ಮತ್ತೊಮ್ಮೆ ಕರೆ:
ಕೆಪಿಎಸ್‌ಸಿ ಸುಧಾರಣೆಗಾಗಿ ಇನ್ನೂ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಬಾಕಿ ಇದ್ದರೆ, ತಡಮಾಡದೆ " ಕೆಪಿಎಸ್‌ಸಿ ಉಳಿಸೋಣ!" ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ತಪ್ಪದೇ ಹಂಚಿಕೊಳ್ಳಬೇಕೆಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದ ಯುವ ಸಮುದಾಯಕ್ಕೆ ಮತ್ತೊಮ್ಮೆ ಕರೆ ನೀಡಿದ್ದಾರೆ.



