ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಕುರಿತು ನ್ಯಾಯಾಂಗ ಸುಪರ್ದಿಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ 'ನೈಜ ಹೋರಾಟಗಾರರ ವೇದಿಕೆ' ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಅಪಪ್ರಚಾರದ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ನೈಜ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎಚ್.ಎಂ. ವೆಂಕಟೇಶ್ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, 'ಕರ್ನಾಟಕ ಹೈಪರ್ ಟ್ರಾಪ್' ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಿರುವ ವಿಡಿಯೋ ಬಗ್ಗೆ ಉಲ್ಲೇಖಿಸಿದ್ದಾರೆ. 2011ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ವಿಷಯದ ಕುರಿತು ಮೂವರು ವ್ಯಕ್ತಿಗಳು ಚರ್ಚೆ ಮಾಡುತ್ತಿರುವುದು ಆ ವಿಡಿಯೋದಲ್ಲಿ ಕಂಡುಬಂದಿದೆ.
ಸದರಿ ವಿಡಿಯೋದ ಸಂಪೂರ್ಣ ಸಾರಾಂಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಕೇಶ್ ಎಂಬವರ ಹೆಸರುಗಳು ಉಲ್ಲೇಖವಾಗಿವೆ. ಅಲ್ಲದೆ, ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ವಕೀಲರ ಹೆಸರುಗಳೂ ಸಹ ಪ್ರಸ್ತಾಪವಾಗಿವೆ. ಒಂದು ವೇಳೆ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೆ ತನಿಖೆ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯುವುದು ಅಸಾಧ್ಯ. ಆದ್ದರಿಂದ, ಕರ್ನಾಟಕ ಹೈಕೋರ್ಟ್ ಅಥವಾ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಎಚ್.ಎಂ. ವೆಂಕಟೇಶ್ ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಪತ್ರದ ಜೊತೆಗೆ 'KARNATAKA HONEYTRAP' ಯೂಟ್ಯೂಬ್ನಲ್ಲಿ ಪ್ರಸಾರವಾಗಿದೆ ಎನ್ನಲಾದ ವಿಡಿಯೋವನ್ನು ಡೌನ್ಲೋಡ್ ಮಾಡಿ ಪೆನ್ಡ್ರೈವ್ನಲ್ಲಿ ಹಾಕಿ, ಅದರ ಸಂಪೂರ್ಣ ಸಾರಾಂಶವನ್ನು ಲಿಖಿತವಾಗಿ ದಾಖಲಿಸಿ ಸಾಕ್ಷ್ಯ ಸಮೇತ ಸಲ್ಲಿಸಲಾಗಿದೆ. ಈ ಗಂಭೀರ ಪ್ರಕರಣದ ಕುರಿತು ಬಾಲ ನ್ಯಾಯ ಮಂಡಳಿ ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಿಗೂ ನೈಜ ಹೋರಾಟಗಾರರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಗಿದೆ.



