ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ಸುದ್ದಿ ತೀವ್ರ ಆಘಾತ ಹಾಗೂ ದುಃಖ ತಂದಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆಯಲ್ಲಿ ಸೋಮವಾರ ಸಚಿವ ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ, ಡಿ. ಸುಧಾಕರ್ ಅವರು ಅಪರೂಪದ ಜನನಾಯಕ. ಸರಳತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯ ಮೂರ್ತರೂಪವಾಗಿದ್ದರು. ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವರು ಸಲ್ಲಿಸಿದ ಸೇವೆ ಅನನ್ಯ. ರೈತರು, ಬಡವರು, ಶೋಷಿತರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ ಅವರ ಅಗಲಿಕೆ ರಾಜ್ಯದ ರಾಜಕಾರಣಕ್ಕೆ ತುಂಬಲಾರದ ನಷ್ಟ" ಎಂದು ಕಂಬನಿ ಮಿಡಿದಿದ್ದಾರೆ.
"ಸುಧಾಕರ್ ರವರ ಸಮುದಾಯದ ಜನ ಜಿಲ್ಲೆಯಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿದ್ದರೂ ಅವರ ಸರಳರ, ಸಜ್ಜನಿಕೆಯಿಂದ್ದಾಗಿಯೇ 25 ವರ್ಷಗಳ ಕಾಲ ಜಿಲ್ಲೆಯ ಜನರ ಮನಸ್ಸನ್ನು ಗೆದ್ದದ್ದರು. ಅಂತಹ ವ್ಯಕ್ತಿ ಅನರೋಗ್ಯದಿಂದಾಗಿ ನಿಧನವಾಗಿರುವುದು ನೋವಿನ ಸಂಗತಿಯಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗದ ಕುಡಿಯುವ ನೀರಿನ ಯೋಜನೆಗಳಿಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ" ಎಂದು ಸಚಿವ ಚಲುವರಾಯಸ್ವಾಮಿ ಸ್ಮರಿಸಿದ್ದಾರೆ.
"ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ವರ್ಗ, ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ. ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ" ಎಂದು ಪ್ರಾರ್ಥಿಸಿದ್ದಾರೆ.


