ಚಂದ್ರವಳ್ಳಿ ನ್ಯೂಸ್, ಮೈಸೂರು:
"ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ" ಎಂಬ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದರ ಬೆನ್ನಲ್ಲೇ ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಕೆಯಾಗಿದೆ.
ಮೈಸೂರಿನ ‘ವಾಯ್ಸ್ ಆಫ್ ಪೀಪಲ್’ ಸಂಸ್ಥೆಯು ಈ ದೂರು ದಾಖಲಿಸಿದ್ದು, ಸಚಿವರು ಸಾರ್ವಜನಿಕರಿಗೆ ನೇರವಾಗಿ ಲಂಚ ನೀಡುವಂತೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಲೋಕಾಯುಕ್ತಕ್ಕೆ ದೂರು: ‘ವಾಯ್ಸ್ ಆಫ್ ಪೀಪಲ್’ ಮುಖ್ಯಸ್ಥ ವಸಂತ ರಾವ್ ಚೌಹಾಣ್ ಅವರು ಸಚಿವ ಶಿವಲಿಂಗೇಗೌಡರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ರಾಜೀನಾಮೆ ಹಾಗೂ ಕ್ಷಮೆಯಾಚನೆಗೆ ಆಗ್ರಹ: ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಶಿವಲಿಂಗೇಗೌಡರು ಸಚಿವ ಸ್ಥಾನದಲ್ಲಿರಲು ಅನರ್ಹರಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.
ಮುಂದಿನ ಹೋರಾಟ: ಈ ವಿಚಾರವಾಗಿ ರಾಜ್ಯಪಾಲರಿಗೂ ದೂರು ಸಲ್ಲಿಸುವುದಾಗಿ ವಸಂತ ರಾವ್ ಚೌಹಾಣ್ ತಿಳಿಸಿದ್ದು, ಸಚಿವರ ವಿರುದ್ಧ ಸಾಮಾಜಿಕ ಮಾಧ್ಯಮಗಳ ಮೂಲಕ ತೀವ್ರ ಅಭಿಯಾನ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ವಿವಾದಕ್ಕೆ ಕಾರಣವಾದ ಹಿನ್ನೆಲೆ ಏನು?
ಹಾಸನ ಜಿಲ್ಲೆಯ ಸಕಲೇಶಪುರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ‘ಪ್ರಜಾಸೇವೆ ಆಂದೋಲನ’ ಸಭೆಯಲ್ಲಿ ಮಾತನಾಡಿದ್ದ ಸಚಿವ ಕೆ.ಎಂ. ಶಿವಲಿಂಗೇಗೌಡರು, "ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ, ಆದರೆ ಬಲವಂತವಾಗಿ ಹಣ ಕಿತ್ತುಕೊಳ್ಳುವುದು ಸರಿಯಲ್ಲ" ಎಂದು ಹೇಳಿದ್ದರು.
ಸಚಿವರ ಈ ಮಾತಿಗೆ ಸಭೆಯಲ್ಲಿದ್ದ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, "ಸರ್ಕಾರ ಅಧಿಕಾರಿಗಳಿಗೆ ಸಂಬಳ ನೀಡುವುದಿಲ್ಲವೇ? ಕೆಲಸಕ್ಕೆ ಹಣೇಕೆ ಕೊಡಬೇಕು?" ಎಂದು ಪ್ರಶ್ನಿಸಿದ್ದರು. ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸಚಿವರು, ತಾವೆಂದೂ ಲಂಚ ನೀಡುವಂತೆ ಹೇಳಿಲ್ಲ, ಬದಲಿಗೆ ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವಂತೆ ಮಾತ್ರ ಸಲಹೆ ನೀಡಿರುವುದಾಗಿ ಸ್ಪಷ್ಟನೆ ನೀಡಿದ್ದರು.
ಆದರೆ, ಈ ಸ್ಪಷ್ಟನೆಯ ಹೊರತಾಗಿಯೂ ಸಚಿವರ ವಿರುದ್ಧ ವಿವಾದ ತಣ್ಣಗಾಗಿಲ್ಲದೆ, ಇದೀಗ ಕಾನೂನಾತ್ಮಕ ಸಮರಕ್ಕೆ ಮುನ್ನುಡಿ ಬರೆದಿದೆ.




