ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಪ್ರಾಪ್ತ ವಯಸ್ಸಿನ ಬಾಲಕಿಯರಲ್ಲಿ ಗರ್ಭಧಾರಣೆಯನ್ನು ಆರಂಭದಲ್ಲೇ ಗುರುತಿಸಿ, ಸಕಾಲದಲ್ಲಿ ವೈದ್ಯಕೀಯ ನೆರವು, ಸಮಾಲೋಚನೆ ಹಾಗೂ ಕಾನೂನು ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಅಧಿಕೃತವಾಗಿ ಪ್ರಮಾಣಿತ ಕಾರ್ಯವಿಧಾನ ಅಧಿಸೂಚನೆ ಹೊರಡಿಸಿದೆ. ಹೈಕೋರ್ಟ್‌ನ ನಿರ್ದೇಶನದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಈ ಹೊಸ ಮಾರ್ಗಸೂಚಿಯು ಪೊಲೀಸ್, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರಗಳ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದ 9ನೇ ತರಗತಿಯ 16 ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗಿದ್ದಳು. ಆದರೆ ಈ ವಿಚಾರವು ಆರಂಭದಲ್ಲಿ ಯಾರಿಗೂ ತಿಳಿದಿರಲಿಲ್ಲ. ಗರ್ಭಧಾರಣೆ 32 ವಾರಗಳ ಹಂತ ತಲುಪಿದ ಬಳಿಕವಷ್ಟೇ ತಾಯಿಗೆ ವಿಷಯ ತಿಳಿದು, ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಗರ್ಭಧಾರಣೆ ತಡವಾಗಿ ಪತ್ತೆಯಾಗುವುದು, ಸಾಮಾಜಿಕ ಕಳಂಕದ ಭಯ, ಲೈಂಗಿಕ ಶಿಕ್ಷಣದ ಕೊರತೆ ಹಾಗೂ ಕಾನೂನು ಹಕ್ಕುಗಳ ಅರಿವಿನ ಕೊರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ವೈದ್ಯಕೀಯ ಮಂಡಳಿಯ ಅಭಿಪ್ರಾಯದಂತೆ ಗರ್ಭಪಾತ ನಡೆಸಲು ಅನುಮತಿ ನೀಡಲಾಗಿತ್ತಾದರೂ ಮಗು ಜೀವಂತವಾಗಿ ಜನಿಸಿತ್ತು. ಬಳಿಕ ಬಾಲಕಿ ಮಗುವಿನ ಆರೈಕೆಯ ಹೊಣೆಗಾರಿಕೆಯನ್ನು ಮುಂದುವರಿಸಲು ಇಚ್ಛಿಸದ ಕಾರಣ, ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು.
ಈ ಘಟನೆಯ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳನ್ನು ನಿಭಾಯಿಸಲು ಹೈಕೋರ್ಟ್ ಸರ್ಕಾರಕ್ಕೆ ಎಸ್‌ಒಪಿ ರೂಪಿಸುವಂತೆ ನಿರ್ದೇಶಿಸಿತ್ತು. ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ನ್ಯಾಯಪೀಠಕ್ಕೆ ಅಗತ್ಯ ಸಲಹೆಗಳನ್ನು ನೀಡಿದ್ದರು. ಸರ್ಕಾರದ ಈ ಎಸ್‌ಒಪಿ ಅಧಿಸೂಚನೆಯನ್ನು ದಾಖಲಿಸಿಕೊಂಡ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಗರ್ಭಪಾತದ ನಿಯಮಗಳು:
ಗರ್ಭಧಾರಣೆಯ ಅವಧಿ 24 ವಾರಗಳೊಳಗಿದ್ದರೆ ವೈದ್ಯಕೀಯ ಗರ್ಭಪಾತಕ್ಕೆ ನ್ಯಾಯಾಲಯ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಪ್ರತ್ಯೇಕ ಆದೇಶದ ಅಗತ್ಯವಿಲ್ಲ. 20 ವಾರಗಳವರೆಗೆ ಒಬ್ಬ ನೋಂದಾಯಿತ ವೈದ್ಯರ ಅಭಿಪ್ರಾಯ ಹಾಗೂ 20ರಿಂದ 24 ವಾರಗಳವರೆಗೆ ಇಬ್ಬರು ನೋಂದಾಯಿತ ವೈದ್ಯರ ಅಭಿಪ್ರಾಯ ಸಾಕು. ಅಪ್ರಾಪ್ತ ವಯಸ್ಕರ ಪ್ರಕರಣದಲ್ಲಿ ಕಾನೂನುಬದ್ಧ ಪಾಲಕರ ಲಿಖಿತ ಒಪ್ಪಿಗೆ ಪಡೆದು, ಕಾನೂನು ನಿಯಮಗಳಿಗೆ ಅನುಗುಣವಾಗಿ ಗರ್ಭಪಾತ ನಡೆಸಬಹುದು. ಜೀವ ಉಳಿಸಲು ತುರ್ತು ಗರ್ಭಪಾತ ಅಗತ್ಯವಿದ್ದಲ್ಲಿ ಕಾಯ್ದೆಯಲ್ಲಿ ಪ್ರತ್ಯೇಕ ಅವಕಾಶವಿದೆ.
ಪೊಲೀಸರಿಗೆ ಕಾಲಮಿತಿಯ ಸೂಚನೆ: ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯ ಮಾಹಿತಿ ದೊರೆತರೆ ತುರ್ತು ವೈದ್ಯಕೀಯ ನೆರವಿಗೆ ಆದ್ಯತೆ ನೀಡಬೇಕು. ಅಗತ್ಯವಿದ್ದರೆ ಶೂನ್ಯ (ಜೀರೋ) ಎಫ್‌ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ತನಿಖೆ ವರ್ಗಾಯಿಸಬೇಕು. ಗರ್ಭಪಾತದ ವೇಳೆ ಸಂಗ್ರಹಿಸುವ ಭ್ರೂಣದ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಒಂದೇ ಜಿಲ್ಲೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ 24 ಗಂಟೆಗಳೊಳಗೆ ಮತ್ತು ಇತರೆ ಸಂದರ್ಭಗಳಲ್ಲಿ 7 ದಿನಗಳೊಳಗೆ ತಲುಪಿಸಬೇಕು.
ಗೌಪ್ಯತೆ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ: ಬಾಲಕಿಯ ಖಾಸಗಿತನ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ. ಎಫ್‌ಐಆರ್ ಅಥವಾ ನ್ಯಾಯಾಲಯದ ಆದೇಶ ಕಾಯುತ್ತಾ ವೈದ್ಯಕೀಯ ಚಿಕಿತ್ಸೆಯನ್ನು ವಿಳಂಬಗೊಳಿಸಬಾರದು. ತುರ್ತು ಗರ್ಭನಿರೋಧಕ ಸೇವೆ, ಎಚ್‌ಐವಿ ತಡೆ, ಸಮಾಲೋಚನೆ ಹಾಗೂ ಅಗತ್ಯವಿದ್ದಲ್ಲಿ ಮನೋವೈದ್ಯರು, ಅನುವಾದಕರು ಅಥವಾ ವಿಶೇಷ ಶಿಕ್ಷಕರ ನೆರವು ಒದಗಿಸಬೇಕು.
ಜೀವಂತ ಜನಿಸಿದ ಮಗುವಿನ ಆರೈಕೆ ಹಾಗೂ ದತ್ತು ವ್ಯವಸ್ಥೆ: ಗರ್ಭಪಾತದ ವೇಳೆ ಮಗು ಜೀವಂತವಾಗಿ ಜನಿಸಿದರೆ ತಕ್ಷಣದ ವೈದ್ಯಕೀಯ ಆರೈಕೆ ಕಲ್ಪಿಸಬೇಕು. ತಾಯಿ ಮಗುವನ್ನು ಇಟ್ಟುಕೊಳ್ಳಲು ಬಯಸುತ್ತಾರೆಯೇ ಅಥವಾ ದತ್ತು ನೀಡಲು ಬಯಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ನಿರ್ಧಾರ ಕೈಗೊಳ್ಳಬೇಕು. ದತ್ತು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮಗುವಿನ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
48 ಗಂಟೆಗಳೊಳಗೆ ಕಾನೂನು ನೆರವು: 24 ವಾರ ಮೀರಿದ ಗರ್ಭಧಾರಣೆಯ ಪ್ರಕರಣಗಳಲ್ಲಿ ತ್ವರಿತ ನ್ಯಾಯ ದೊರಕಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ವಿಭಾಗಗಳಲ್ಲಿ ತಲಾ ಕನಿಷ್ಠ ಐವರು ವಕೀಲರನ್ನು ನಿಯೋಜಿಸಬೇಕು. ಮಾಹಿತಿ ದೊರೆತ 48 ಗಂಟೆಗಳೊಳಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ವಿಶೇಷ ಪರಿಹಾರ ಮೊತ್ತವನ್ನು ವಾರದೊಳಗೆ ವಿತರಿಸಬೇಕು.
ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಮತ್ತು ಸಿಬ್ಬಂದಿಗೆ ತರಬೇತಿ: 5ರಿಂದ 18 ವರ್ಷದ ಮಕ್ಕಳಿಗೆ ವಯೋಮಾನಕ್ಕೆ ತಕ್ಕಂತೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಶಿಕ್ಷಣ ನೀಡಬೇಕು. ಶಾಲೆಗಳು, ಆಸ್ಪತ್ರೆಗಳು ಮತ್ತು ಮಕ್ಕಳ ಆರೈಕೆ ಸಂಸ್ಥೆಗಳ ಸಿಬ್ಬಂದಿಗೆ ತರಬೇತಿ ಕಲ್ಪಿಸಬೇಕು. ಮಕ್ಕಳ ಮಾಸಿಕ ಋತುಚಕ್ರದ ಬಗ್ಗೆ ಅನಗತ್ಯ ನಿಗಾ ವಹಿಸುವುದು ಅಥವಾ ಕಡ್ಡಾಯ ಗರ್ಭಧಾರಣೆ ಪರೀಕ್ಷೆ ನಡೆಸುವುದನ್ನು ನಿಷೇಧಿಸಲಾಗಿದೆ.
ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವ ಮೂಲಕ ಈ ಮಾರ್ಗಸೂಚಿಯ ಅನುಷ್ಠಾನವನ್ನು ಪರಿಶೀಲಿಸಲಾಗುತ್ತಿದ್ದು, ವಾರ್ಷಿಕವಾಗಿ ಎಸ್ಒಪಿಯನ್ನು ಪರಿಷ್ಕರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.



