ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕ ಸ್ಥಳದಲ್ಲಿ ಅಸಮರ್ಪಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಸ್ಥಳೀಯ ಯುವಕನೊಬ್ಬ ತರಾಟೆಗೆ ತೆಗೆದುಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನ ಸದಾಶಿವನಗರದ ಖಾಲಿ ನಿವೇಶನವೊಂದರ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಶಾಸಕರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿವರ: ಪ್ರಶ್ನಿಸಿದ ಯುವಕ: ಸದಾಶಿವನಗರದ ಖಾಲಿ ನಿವೇಶನದ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶಾಸಕ ಮುನಿರತ್ನ ಅವರನ್ನು ಯುವಕನೊಬ್ಬ ತಡೆದು ಪ್ರಶ್ನಿಸಿದ್ದಾನೆ.
ವಾಗ್ದಾದ ಹಾಗೂ ಹಲ್ಲೆ ಯತ್ನ: ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಶಾಸಕರು ಏಕವಚನದಲ್ಲಿ ನಿಂದಿಸಿ, ಅಸಭ್ಯ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಅಲ್ಲದೆ, ತನ್ನ ತಾಯಿಯ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದನ್ನು ಸಹಿಸದೆ ಯುವಕ ಶಾಸಕರ ಕತ್ತಿನ ಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾನೆ.
ಪೊಲೀಸರ ಎಂಟ್ರಿ: ಸ್ಥಳದಲ್ಲಿದ್ದ ಸಾರ್ವಜನಿಕರು ಈ ಇಡೀ ಜಟಾಪಟಿಯನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕರು ಸಮಾಧಾನಗೊಳ್ಳಲು ಯತ್ನಿಸಿದ್ದು, ಕೊನೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ಜನಪ್ರತಿನಿಧಿಗಳೇ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ವರ್ತಿಸುವುದು ಎಷ್ಟರಮಟ್ಟಿಗೆ ಸರಿ ಎಂದು ನೆಟಿಗರು ತೀವ್ರವಾಗಿ ಖಂಡಿಸುತ್ತಿದ್ದಾರೆ.




