ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬಳ್ಳಾರಿ ಹೊರವಲಯದ ಅಲ್ಲಿಪುರ ಬಳಿಯ ತುಂಗಭದ್ರಾ ಕೆಳಹಂತದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿಯ ವಿರುದ್ಧ ಗಂಭೀರ ಕಿರುಕುಳದ ಆರೋಪ ಕೇಳಿಬಂದಿದೆ.
ಬಳ್ಳಾರಿಯ ಮಿಲ್ಲರ್ಪೇಟೆ ನಿವಾಸಿ ಸಿಮ್ರಾನ್ (26), ತಮ್ಮ ಮಕ್ಕಳಾದ ಮೂರು ವರ್ಷದ ಮಹಮ್ಮದ್ ಆಯಾನ್ ಮತ್ತು ಒಂದೂವರೆ ವರ್ಷದ ಆಯುಷ್ ಜೊತೆಗೆ ಕಾಲುವೆಗೆ ಹಾರಿ ಮೃತಪಟ್ಟ ದುರ್ದೈವಿಗಳು. ಈ ಸಂಬಂಧ ಮೃತ ಮಹಿಳೆಯ ತಾಯಿ ಆಯಿಷಾ ಪರ್ವೀನ್ ಅವರು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ತಮ್ಮ ಅಳಿಯನ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಸದ್ಯ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಮಕ್ಕಳಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ದೂರಿನಲ್ಲಿರುವ ಪ್ರಮುಖ ಆರೋಪಗಳು: ಮೃತ ಸಿಮ್ರಾನ್ ಅವರ ಪತಿ ಸದ್ದಾಂ ಹುಸೇನ್ ನೀಡುತ್ತಿದ್ದ ನಿರಂತರ ಕಿರುಕುಳವೇ ಈ ದುರಂತಕ್ಕೆ ನೇರ ಕಾರಣ ಎಂದು ತಾಯಿ ಆಯಿಷಾ ಪರ್ವೀನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಪತಿ ಸದ್ದಾಂ ಹುಸೇನ್ ಬೇರೆ ಮಹಿಳೆಯೊಬ್ಬಳ ಜೊತೆ ಸಂಪರ್ಕ ಹೊಂದಿದ್ದು, ಆಕೆಗೆ ಮನೆ ನಿರ್ಮಿಸಿಕೊಡಲು 10 ಲಕ್ಷ ರೂಪಾಯಿ ಹಣ ತರುವಂತೆ ಪತ್ನಿಗೆ ತೀವ್ರವಾಗಿ ಒತ್ತಡ ಹೇರುತ್ತಿದ್ದನು. ಅಷ್ಟೇ ಅಲ್ಲದೆ, ಹಣಕ್ಕಾಗಿ ಪತ್ನಿಯ ಮೇಲೆ ನಿತ್ಯ ಹಲ್ಲೆ ನಡೆಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ನೀಡಲಾಗಿದ್ದ 15 ತೊಲೆ ಚಿನ್ನಾಭರಣಗಳನ್ನು ಸಹ ಆತ ಮಾರಾಟ ಮಾಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾಯಿ ಹಾಗೂ ಇಬ್ಬರು ಕಂದಮ್ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಈಗ ಆಕ್ರಂದನ ಮುಗಿಲುಮುಟ್ಟಿದೆ. ಈ ದುರ್ಘಟನೆಗೆ ನಿಖರ ಕಾರಣವೇನು, ಪತಿಯ ವಿರುದ್ಧ ಕೇಳಿಬಂದಿರುವ ಕಿರುಕುಳದ ಆರೋಪಗಳಲ್ಲಿನ ಸತ್ಯಾಂಶ ಎಷ್ಟು ಹಾಗೂ ಘಟನೆಗೂ ಮುನ್ನ ದಂಪತಿ ನಡುವೆ ನಡೆದ ಗಂಭೀರ ಬೆಳವಣಿಗೆಗಳೇನು ಎಂಬಿತ್ಯಾದಿ ಅಂಶಗಳು ಸಂಪೂರ್ಣ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.




